- ಮದ್ದೂರಿನಲ್ಲಿ ಯತ್ನಾಳ್ ಶಕ್ತಿ ಪ್ರದರ್ಶನ
- ಕರ್ನಾಟಕಕ್ಕೆ ಬುಲ್ಡೋಜರ್ ಬಾಬ ಬೇಕು ಹಾಗಾಗಿ ನಮ್ಮ ಗುರುತು JCB ಎಂದ ಯತ್ನಾಳ್
- ಬಿಜೆಪಿ ಹೈಕಮಾಂಡ್‌ಗೆ ಖಡಕ್ ಸಂದೇಶ (Yatnal Roars in Maddur)
Mandya: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ(Maddur) ನಡೆದ ಇತ್ತೀಚಿನ ಘಟನೆಗಳು ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಗಿದ್ದರೂ, ಪರಿಸ್ಥಿತಿ ಇದೀಗ ನಿಧಾನವಾಗಿ ಶಾಂತಗೊಂಡಿದೆ.
ಆದರೆ ಈ ಘಟನೆ ಇನ್ನೂ ಜನಮನದಲ್ಲಿ ಬೂದಿಮುಚ್ಚಿದ ಕೆಂಡದಂತೆಯೇ ದಹಿಸುತ್ತಿದೆ. ಇದೇ ಸಂದರ್ಭದಲ್ಲಿ ಹಿಂದೂ ಫೈರ್‌ಬ್ರ್ಯಾಂಡ್ ಹಾಗೂ ಬಿಜೆಪಿ ಉಚ್ಛಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagowda Patil Yatnal) ಮದ್ದೂರಿಗೆ ಭೇಟಿ ನೀಡಿ ಬಿರುಸಿನ ಭಾಷಣ ಮಾಡಿ ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವ ಕುರಿತು ಸೂಚನೆ ನೀಡಿದ್ದಾರೆ.
ಇನ್ನು ಯತ್ನಾಳ್ ಮದ್ದೂರಿಗೆ ಆಗಮಿಸಿದಾಗ ಸ್ಥಳೀಯ ಹಿಂದೂ ಕಾರ್ಯಕರ್ತರು ಭರ್ಜರಿಯಾಗಿ ಬರಮಾಡಿಕೊಂಡರು. ರಾಮಮಂದಿರದ ಬಳಿಯ ಕಾರ್ಯಕ್ರಮದಲ್ಲಿ ಅವರು ಮಾಡಿದ ಭಾಷಣ ಮಾಧ್ಯಮಗಳ ಗಮನ ಸೆಳೆದಿತು.
ತಮ್ಮ ತೀಕ್ಷ್ಣ ಶೈಲಿಯಲ್ಲಿ ಮಾತನಾಡಿದ ಯತ್ನಾಳ್, ರಾಜ್ಯ ಸರ್ಕಾರದ(State Govt) ವಿರುದ್ಧ ಮಾತ್ರವಲ್ಲ, ಬಿಜೆಪಿ ಹೈಕಮಾಂಡ್(BJP High Command) ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಭವಿಷ್ಯದ ದಿಕ್ಕು ಏನಾಗಬಹುದು ಎಂಬುದನ್ನು ಸ್ಪಷ್ಟಪಡಿಸಿದ ಯತ್ನಾಳ್, ಬಿಜೆಪಿ ನನ್ನನ್ನು ಗೌರವದಿಂದ ತೆಗೆದುಕೊಳ್ಳದಿದ್ದರೆ,
ನಾನು ‘ಕರ್ನಾಟಕ ಹಿಂದೂ ಪಾರ್ಟಿ’ ಕಟ್ಟುತ್ತೇನೆ ಎಂದು ಘೋಷಿಸಿದರು. ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಮೈಸೂರು ಪ್ರವಾಸ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಈ ಘೋಷಣೆಯ ಮೂಲಕ ಯತ್ನಾಳ್ ನೇರವಾಗಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಹೊಸ ಪಕ್ಷದ ಗುರುತು JCB ಆಗಿರುತ್ತದೆ ಎಂದು ಯತ್ನಾಳ್ ಘೋಷಿಸಿದರು. ಇದು ಹಿಂದೂ ಜನತೆಯಲ್ಲಿ ಬುಲ್ಡೋಜರ್ ರಾಜಕೀಯದ ಪ್ರತಿರೂಪವಾಗಲಿದೆ ಎಂಬ ಸಂದೇಶವನ್ನು ಅವರು ಕೊಟ್ಟರು.
“ಕರ್ನಾಟಕಕ್ಕೆ ಒಬ್ಬ ಬುಲ್ಡೋಜರ್ ಬಾಬ ಬೇಕಾಗಿದೆ” ಎಂದು ಘೋಷಿಸಿದ ಅವರು, ಸಿಎಂ ಸಿದ್ದರಾಮಯ್ಯ(CM Siddaramaiah) ಸರ್ಕಾರವನ್ನು “ಔರಂಗಜೇಬ್ ಸರ್ಕಾರ” ಎಂದು ಹೋಲಿಸಿದರು.
“ವಕ್ಫ್ ದೇಣಿಗೆಗಳನ್ನು ಹೆಚ್ಚಿಸುವುದು, ಮಸೀದಿಗಳಿಗೆ ಮೀಸಲಾತಿ ನೀಡುವುದು ಮುಸ್ಲಿಂ ಪರ ನೀತಿಗಳು. ಇಂತಹ ಸರ್ಕಾರ ಕರ್ನಾಟಕಕ್ಕೆ ಬೇಡ” ಎಂದು ಕಿಡಿ ಕಾರಿದ್ದಾರೆ.
2028ಕ್ಕೆ ವಿಧಾನಸೌಧದ ಮುಂದೆ ಭಗವಧ್ವಜ ಹಾರಿಸಬೇಕು. ನನಗೆ ಆಶೀರ್ವಾದ ಮಾಡಿ, ನನಗೆ ಅಧಿಕಾರ ನೀಡಿ ಎಂದು ಅವರು ಜನತೆಗೆ ಮನವಿ ಮಾಡಿದರು.
ತಮ್ಮ ಸರ್ಕಾರ ಬಂದರೆ ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರು. ಗೋಹತ್ಯೆ ಮಾಡುವವರನ್ನು ಕಠಿಣ ಕ್ರಮಕ್ಕೆ ಒಳಪಡಿಸುತ್ತೇವೆ .
ವಕ್ಫ್ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ದೇವಸ್ಥಾನದ ಹುಂಡಿ ಹಣ ದೇವಸ್ಥಾನಗಳ ಅಭಿವೃದ್ಧಿಗೆ ಮೀಸಲಿಸುತ್ತೇವೆ ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿಯವರು ಹೊಂದಾಣಿಕೆ ರಾಜಕಾರಣಕ್ಕೆ ಬಲಿಯಾಗಿದ್ದಾರೆ.
ಹೊಂದಾಣಿಕೆ ಮಾಡುವವರನ್ನು ಕೈಬಿಟ್ಟು ನಮ್ಮಂತಹವರನ್ನು ಬೆಂಬಲಿಸಬೇಕು. ಇಲ್ಲದಿದ್ದರೆ ನಾವು ಹೊಸ ಪಕ್ಷ ಕಟ್ಟುತ್ತೇವೆ ಎಂದು ಯತ್ನಾಳ್ ಹೈಕಮಾಂಡ್‌ಗೆ ಸ್ಪಷ್ಟ ಎಚ್ಚರಿಕೆ ನೀಡಿದರು.
ಇದನ್ನು ಓದಿ : ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ: ಉದ್ವಿಗ್ನ ವಾತಾವರಣ
ಪ್ರತಾಪ್ ಸಿಂಹ(Pratap Simha) ಅವರ ಜೊತೆಗೂಡಿ ಹೊಸ ಸರ್ಕಾರ ತರುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. (Yatnal Roars in Maddur)