ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ. ಈ ಪೈಕಿ ಕಳೆದ ವಾರ ಬಿಡುಗಡೆಗೊಂಡ 4 ಸಿನಿಮಾಗಳ ಪೈಕಿ ನಟ ಪ್ರದೀಪ್ ಅಭಿನಯದ ಯೆಲ್ಲೋ ಬೋರ್ಡ್ ಸಿನಿಮಾ ವಿಶೇಷವಾಗಿರುವುದರ ಜೊತೆಗೆ ಒಂದೊಳ್ಳೆ ಸಂದೇಶದ ಮೂಲಕ ಕನ್ನಡಿಗರ ಮುಂದೆ ಹಾಜರಾಗಿದೆ.
ಹೌದು, ಮೋಕ್ಷ, ಅಘೋರ, ಲೀಸ ಸಿನಿಮಾಗಳು ಹಾರರ್ ಜಾನರ್ ಆಗಿ ಸಿನಿ ಪ್ರೇಕ್ಷಕರ ಮುಂದೆ ಬಂದಿವೆ. ಆದರೆ ಈ ಪೈಕಿ ವಿಭಿನ್ನವಾಗಿ ಕನ್ನಡ ಸಿನಿಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿರುವುದು ಯೆಲ್ಲೋ ಬೋರ್ಡ್ ಸಿನಿಮಾ. ಪ್ರತಿವಾರ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುವ ಪ್ರಮುಖ ಸಿನಿಮಾಗಳ ವಿಮರ್ಶೆಯನ್ನು ನಿಮಗೆ ತಲುಪಿಸುವ ಕೆಲಸ ನನ್ನದು.
ಆಯಾ ಸಿನಿಮಾದ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳನ್ನು ಹೇಳುವುದೇ ಈ ವಿಮರ್ಶೆಯ ಮುಖ್ಯ ಉದ್ದೇಶವಾಗಿದೆ. ಕೆಲವರಿಗೆ ಸಿನಿಮಾ ಕುರಿತು ನೆಗೆಟಿವ್ ಹೇಳುವ ಅವಶ್ಯಕತೆ ಇದೆಯಾ? ಎಂಬ ಪ್ರಶ್ನೆ ಮೂಡುವುದು ಖಚಿತ. ಆದರೆ ಸಿನಿಮಾ ಕುರಿತಾದ ಅಂಶಗಳನ್ನು ನೇರವಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳುವ ಕೆಲಸ ಇಲ್ಲಿ ಮಾಡಿದ್ದೇನೆ! ನಟ ಪ್ರದೀಪ್ ನಟನೆಯ ಯೆಲ್ಲೋ ಬೋರ್ಡ್ ಸಿನಿಮಾ ಒಂದೊಳ್ಳೆ ಸಂದೇಶವನ್ನು ಪ್ರೇಕ್ಷಕರ ಮುಂದಿಟ್ಟಿದೆ! ಈ ಸಿನಿಮಾ ಬಗ್ಗೆ ನಿಮ್ಮಲ್ಲಿ ಮೂಡಿರುವ ಕುತೂಹಲಕ್ಕೆ ಈ ವಿಮರ್ಶೆಯಲ್ಲಿ ಉತ್ತರ ಕೊಡುವ ಪ್ರಯತ್ನ ನನ್ನದು, ಮುಂದೆ ಓದಿ.
ಕನ್ನಡ ಚಿತ್ರರಂಗದಲ್ಲಿ ಜಾಲಿ ಡೇಸ್ ಸಿನಿಮಾ ಮೂಲಕ ಕನ್ನಡಿಗರಿಗೆ ಚಿರಪರಿಚಿತಗೊಂಡ ನಟ ಎಂದರೆ ಅದು ಪ್ರದೀಪ್(Pradeep). ಈ ಸಿನಿಮಾದಲ್ಲಿ ಮಿಂಚಿದ ನಟ ಪ್ರದೀಪ್, ಬಳಿಕ ಅಷ್ಟು ಸೌಂಡ್ ಮಾಡಲಿಲ್ಲ! ಟೈಗರ್(Tiger) ಸಿನಿಮಾ ಮೂಲಕ ಮತ್ತೆ ಘರ್ಜಿಸಲು ಬಂದರು, ಆದರೆ ಆ ಘರ್ಜನೆ ಕನ್ನಡಿಗರಿಗೆ ಮುಟ್ಟಲಿಲ್ಲ! ಆದರೂ ಹಠ ಬಿಡದ ಪ್ರದೀಪ್, ತನ್ನ ಘರ್ಜನೆಯನ್ನು ಒಬ್ಬ ಕ್ಯಾಬ್ ಚಾಲಕನಾಗಿ ನಟಿಸುವ ಮೂಲಕ ನಿಜಕ್ಕೂ ಇಂದು ಘರ್ಜಿಸಿದ್ದಾರೆ. ಈ ಘರ್ಜನೆ ಖಂಡಿತ ಕನ್ನಡ ಸಿನಿಪ್ರೇಕ್ಷಕರಿಗೆ ತಲುಪಿದೆ ಎಂಬುದರಲ್ಲಿ ಅನುಮಾನವೇ ಬೇಡ.
ಸಿನಿಮಾ ಪ್ರಾರಂಭದ ಮೊದಲಿನಿಂದಲೇ ಪ್ರೇಕ್ಷಕನನ್ನು ಕುತೂಹಲದಿಂದ ಮುಂದಕ್ಕೆ ಕರೆದುಕೊಂಡು ಹೋಗುತ್ತದೆ ಕಥೆ. ಒಬ್ಬ ಬಡ ಕ್ಯಾಬ್ ಚಾಲಕನಾಗಿ ಕಾಣಿಸಿಕೊಂಡಿರುವ ಪ್ರದೀಪ್, ಮುಗ್ದ ನಟನೆಯಿಂದ ಪ್ರೇಕ್ಷಕನಿಗೆ ಹಂತ ಹಂತವಾಗಿ ಹತ್ತಿರವಾಗುತ್ತಾರೆ. ತನ್ನ ಕೆಲಸವಾಯಿತು, ತನ್ನ ಜೀವನವಾಯಿತು ಎಂದು ಜೀವನ ನಡೆಸುವ ಪ್ರದೀಪ್ ಜೀವನಕ್ಕೆ ಒಂದು ದೊಡ್ಡ ಕಳಂಕ, ಕಪ್ಪು ಚುಕ್ಕೆ ಬರುತ್ತೆ! ಇದರಿಂದ ಬಡ ಕ್ಯಾಬ್ ಚಾಲಕ ಅದರಿಂದ ಹೇಗೆ ಹೊರಬರುತ್ತಾನೆ? ತಾನು ಮಾಡಿರುವುದು ನಿಜಕ್ಕೂ ತಪ್ಪಾ? ಸತ್ಯಾನು ಸತ್ಯತೆ ಹೊರಬರುತ್ತಾ? ನ್ಯಾಯಕ್ಕೆ ಜಯವಿದೆಯಾ? ಎಂಬುದಕ್ಕೆ ಹಂತ ಹಂತವಾಗಿ ಸ್ಪಷ್ಟತೆ ಸಿಗುತ್ತ ಹೋಗುತ್ತದೆ. ಕರ್ನಾಟಕದಲ್ಲಿ ಕನ್ನಡ ರಾರಾಜಿಸತ್ತಿದೆ ಎಂದರೆ ಅದು ರಾಜ್ಯದ ಆಟೋ, ಕ್ಯಾಬ್ ಚಾಲಕರಿಂದಲೇ ಎಂಬ ಡೈಲಾಗ್ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತದೆ.
ಈ ಸಿನಿಮಾದಲ್ಲಿ 5 ಹಾಡುಗಳಿದ್ದು, ರಘು ದೀಕ್ಷಿತ್(Raghu Dixit) ಅವರ ಕಂಠದಲ್ಲಿ ಮೂಡಿಬಂದಿರುವ ನಮ್ಮ ಬೆಂಗಳೂರು(Bengaluru) ಹಾಡು, ಪ್ರೇಕ್ಷಕನಿಗೆ ಬೆಂಗಳೂರನ್ನು 3:40 ನಿಮಿಷಗಳಲ್ಲಿ ಪರಿಚಯಿಸುತ್ತದೆ ಎಂಬುದು ವಿಶೇಷ. ಇನ್ನು ಪ್ರದೀಪ್ ಅವರಿಗೆ ನಾಯಕಿಯಾಗಿ ಸಾಥ್ ನೀಡಿರುವ ಅಹಲ್ಯಾ ಸುರೇಶ್(Ahalya Suresh) ತಮ್ಮ ನಟನೆಯಲ್ಲಿ ಸಿನಿ ಪ್ರೇಕ್ಷಕರನ್ನು ಗೆಲ್ಲುವುದಂತೂ ಖಚಿತ ಎನ್ನಬಹುದು.
ಸಿನಿಮಾ ಪೂರ ಅಹಲ್ಯಾ ಸುರೇಶ್ ಅವರ ಅಭಿನಯ ನಿಜಕ್ಕೂ ಪ್ರೇಕ್ಷಕರನ್ನು ರಂಜಿಸುತ್ತದೆ. ಸಿನಿಮಾ ಅಂತ್ಯದವರೆಗೂ ನಟಿ ಅಹಲ್ಯಾ ಸುರೇಶ್ ಅವರ ಪಾತ್ರ ಪ್ರಮುಖವಾಗಿದೆ. ಯೆಲ್ಲೋ ಬೋರ್ಡ್ ಸಿನಿಮಾ ಕಥೆ-ಚಿತ್ರಕಥೆ-ನಿರ್ದೇಶನ-ಸಂಭಾಷಣೆ ಇಷ್ಟು ಜವಾಬ್ದಾರಿಯನ್ನು ಹೊತ್ತ ತ್ರಿಲೋಕ್ ರೆಡ್ಡಿ(Thrilok Reddy) ಅವರು ಸಿನಿಮಾ ಕಥೆಯನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಡೈಲಾಗ್, ಚಿತ್ರೀಕರಣಕ್ಕೆ ಬಳಸಿಕೊಂಡಿರುವ ಜಾಗಗಳು, ಬಿಜಿಎಮ್ ಕೆಲಸಗಳು ತೆರೆಮೇಲೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕಾತುರದಿಂದ, ಕುತೂಹಲದಿಂದ ಸಿನಿಮಾ ನೋಡುವ ಪ್ರೇಕ್ಷಕನಿಗೆ ಸಾಧು ಕೋಕಿಲ ಅವರ ಹಾಸ್ಯ ಅಲ್ಲಲ್ಲಿ ನಗೆಯ ಕಚಗುಳಿ ಇಡುತ್ತೆ. ಸಿನಿಮಾ ಪ್ರಾರಂಭದಿಂದ ಅಂತ್ಯದವರೆಗೂ ಸಿನಿ ಪ್ರೇಕ್ಷಕನಿಗೆ ಅಷ್ಟೂ ಬೋರ್ ಹೊಡಿಸದೆ, ಒಂದೊಳ್ಳೆ ಸಂದೇಶವನ್ನು ಸಾರುವುದೇ ಈ ಸಿನಿಮಾದ ಮುಖ್ಯ ಉದ್ದೇಶವಾಗಿದೆ.
ಒಂದೊಳ್ಳೆ ಸಂದೇಶವನ್ನು ಕನ್ನಡ ಸಿನಿಪ್ರೇಕ್ಷಕರಿಗೆ ತಲುಪಿಸುವಲ್ಲಿ ಯೆಲ್ಲೋ ಬೋರ್ಡ್(Yellow Board) ಚಿತ್ರತಂಡ ಯಶಸ್ವಿಯಾಗಿದೆ, ಅದರಲ್ಲಿ ಕಿಂಚಿತ್ತು ಅನುಮಾನವೇ ಬೇಡ! ಸಿನಿಮಾದಲ್ಲಿ ಕಥೆ ಹೇಳುವ ಸಲುವಾಗಿ ಅಲ್ಲಲ್ಲಿ ಬೋರ್ ಹೊಡಿಸಿದೆ ಬಿಟ್ಟರೇ ಬೇರೆಲ್ಲಾ ಕೆಲಸಗಳನ್ನು ಚಿತ್ರತಂಡ ಅದ್ಬುತವಾಗಿ ಮಾಡಿದೆ. ಒಂದೊಳ್ಳೆ ಸಂದೇಶದ ಮುಖೇನ ಸಿನಿಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ಕಟ್ಟಿಕೊಟ್ಟಿದೆ ಚಿತ್ರತಂಡ. ಇದು ನಿಜಕ್ಕೂ ಶ್ಲಾಘನೀಯ! ಒಟ್ಟಾರೆ ಹೇಳುವುದಾದರೇ ನಟ ಪ್ರದೀಪ್(Pradeep) ಅವರು ಯೆಲ್ಲೋ ಬೋರ್ಡ್ ಸಿನಿಮಾ ಮೂಲಕ ಘರ್ಜಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡ ಸಿನಿ ಪ್ರೇಕ್ಷಕರಿಗೆ ಒಂದೊಳ್ಳೆ ಸಂದೇಶವಿರುವ ಸಿನಿಮಾವನ್ನು ಕೊಡುಗೆಯಾಗಿ ಕೊಟ್ಟಿರುವುದಕ್ಕೆ ಧನ್ಯವಾದ. ವಿಶೇಷವಾಗಿ ಈ ಸಿನಿಮಾ ಹೆಣ್ಣು ಮಕ್ಕಳು ನೋಡ್ಲೇಬೇಕು, ಜೊತೆಗೆ ಕುಟುಂಬ ಸಮೇತ ಕುಳಿತು ನೋಡುವಂತ ಒಂದೊಳ್ಳೆ ಸಿನಿಮಾ ಯೆಲ್ಲೋ ಬೋರ್ಡ್.
ಕನ್ನಡಿಗರಲ್ಲಿ ಮನವಿ : “ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಿ ವಿನಃ ಪೈರಸಿಯಲ್ಲಿ ಬಂದ ಲಿಂಕ್ ಅಥವಾ ಓಟಿಟಿ ರಿಲೀಸ್ಗೆ ಕಾಯಬೇಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುವ ಮೂಲಕ ಆಯಾ ಸಿನಿಮಾದ ನಟ, ನಟಿ, ತಂತ್ರಜ್ಞರು ಸೇರಿದಂತೆ ತೆರೆ ಹಿಂದಿನ ತಂತ್ರಜ್ಞರು, ಲೈಟ್ ಬಾಯ್ಸ್ ಎಲ್ಲರ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತೆಯೇ ಸರಿ”.
- ಮೋಹನ್ ಶೆಟ್ಟಿ