ಉತ್ತರಪ್ರದೇಶದ(Uttarpradesh) ಮುಖ್ಯಮಂತ್ರಿ(Chiefminister) ಯೋಗಿ ಆದಿತ್ಯನಾಥ್(Yogi Adityanath) ತಮ್ಮ ಸಂಪುಟದ ಎಲ್ಲ ಸಚಿವರು ಕಡ್ಡಾಯವಾಗಿ ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲ ಸದಸ್ಯರ ಆಸ್ತಿಯನ್ನು(Property) ಆನ್‍ಲೈನ್ ಪೋರ್ಟಲ್(Online Portal) ಮೂಲಕ ಒಂದು ತಿಂಗಳೊಳಗಾಗಿ ಘೋಷಣೆ ಮಾಡಬೇಕೆಂದು ಆದೇಶಿಸಿದ್ದಾರೆ.

ಸಚಿವರ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅನೇಕ ಕಠಿಣ ಕ್ರಮಗಳನ್ನು ಯೋಗಿ ಆದಿತ್ಯನಾಥ್ ಕೈಗೊಳ್ಳುತ್ತಿದ್ದಾರೆ. ಉತ್ತಮ ಮತ್ತು ಪಾರದರ್ಶಕ ಆಡಳಿತಕ್ಕೆ ಯೋಗಿ ಆದಿತ್ಯನಾಥ್ ಹೆಚ್ಚಿನ ಒತ್ತು ನೀಡುತ್ತಿದ್ದು, ಕೆಳ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಗ್ರಹಿಸುವುದಕ್ಕಿಂತ ಮೇಲ್ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಹಠಕ್ಕೆ ಬಿದ್ದಿರುವ ಸಿಎಂ ಯೋಗಿ ಆದಿತ್ಯನಾಥ್ ಇನ್ನು ಮುಂದೆ ಸಚಿವರು ಮತ್ತು ಅವರ ಕುಟುಂಬದ ಸದಸ್ಯರು ಯಾವುದೇ ಕಮೀಷನ್ ಸೇರಿದಂತೆ ಸರ್ಕಾರದ ಯಾವುದೇ ಕಾರ್ಯದಲ್ಲಿ ತಲೆ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವರ ಕುಟುಂಬ ಸದಸ್ಯರು ಸರ್ಕಾರಿ ಕೆಲಸಗಳಲ್ಲಿ ಭಾಗಿಯಾಗದಂತೆ ಸಚಿವರು ಎಚ್ಚರಿಕೆ ವಹಿಸಬೇಕು. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪ್ರಜಾಪ್ರತಿನಿಧಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪ್ರಜಾಪ್ರತಿನಿಧಿಗಳು ಪ್ರಜಾತಾಂತ್ರಿಕವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಜನಬೆಂಬಲ ಗಳಿಸಲು ಸಾಧ್ಯ. ಈ ಹಿಂದೆ ಉತ್ತರಪ್ರದೇಶದಲ್ಲಿ ಏನಾಗಿದೆ ಎಂಬುದರ ಬಗ್ಗೆ ಚಿಂತಿಸಬೇಡಿ. ಇನ್ನು ಮುಂದೆ ಉತ್ತರಪ್ರದೇಶ ಹೀಗಾಗಲಿದೆ ಎಂದು ಜನತೆಗೆ ವಿಶ್ವಾಸ ಮೂಡಿಸಿ ಎಂದು ಯೋಗಿ ಸಚಿವರಿಗೆ ಸೂಚನೆ ನೀಡಿದ್ದಾರೆ.

ಇನ್ನು ಯೋಗಿ ಆದಿತ್ಯನಾಥ್ ಎರಡನೇಯ ಅವಧಿಗೆ ಅಧಿಕಾರಕ್ಕೇರಿದ ನಂತರ ಅನೇಕ ಕಠಿಣ ಕಾನೂನುಗಳನ್ನು ಜಾರಿಗೆ ತರುತ್ತಿದ್ದಾರೆ. ಸ್ವಜನಪಕ್ಷಪಾತಕ್ಕೆ ಅವಕಾಶ ನೀಡದೇ, ನೇರವಾಗಿ ಸೂಚನೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಉತ್ತರಪ್ರದೇಶದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಹೊಸ ಆಯಾಮ ನೀಡಿದ್ದಾರೆ.