ಇಂದಿನಿಂದ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳು ಜನರನ್ನು ಸೆಳೆಯುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿವೆ. ಈ ನಡುವೆ ಯೋಗಿ ಆದಿತ್ಯನಾಥ್ ವೀಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶ, ಕಾಶ್ಮೀರ, ಕೇರಳ ಅಥವಾ ಬಂಗಾಳ ಆಗಬಹುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಮೊದಲ ಹಂತದ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಭಯ ಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ.

ಕಳೆದ ಐದು ವರ್ಷಗಳ ನನ್ನ ಶ್ರಮಕ್ಕೆ ನಿಮ್ಮ ಮತವೇ ವರದಾನವಾಗಿದೆ. ನಿಮ್ಮ ಮತವೂ ನಿಮ್ಮ ಭಯಮುಕ್ತ ಬದುಕಿಗೆ ಎಂಬುದನ್ನು ನೀವೇ ಖಚಿತ ಪಡಿಸಿಕೊಳ್ಳಿ. ದೊಡ್ಡ ನಿರ್ಧಾರದ ಸಮಯ ಬಂದಿದೆ ಎಂದು ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿ ಪರ ಕೆಲಸಗಳು ನಡೆದಿವೆ. ಮತದಾರರು ಎಚ್ಚರ ತಪ್ಪಿದರೆ ಈ ಐದು ವರ್ಷಗಳ ದುಡಿಮೆ ಹಾಳಾಗುತ್ತದೆ. ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕ್ಷಣ ಮಾತ್ರದಲ್ಲಿ ಉತ್ತರಪ್ರದೇಶವು ಕಾಶ್ಮೀರ, ಕೇರಳ ಮತ್ತು ಬಂಗಾಳವಾಗಲಿದೆ ಎಂದು ವೀಡಿಯೋದಲ್ಲಿ ಹೇಳಿದರು.

ಉತ್ತರ ಪ್ರದೇಶ ಚುನಾವಣೆ ಇಂದಿನಿಂದ ಮೊದಲನೇ ಹಂತದ ಮತದಾನ ಪ್ರಾರಂಭವಾಗಿದ್ದು, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಅಧಿಕಾರವನ್ನು ಮುಂದುವರೆಸಲು ಪ್ರಯತ್ನ ನಡೆಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಅವರಿಗೆ ಪ್ರಬಲ ಎದುರಾಳಿ ಪಕ್ಷವಾಗಿದೆ.