ಲಕ್ನೋ ನ 8 : ಮುಂದಿನ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ಸ್ಪರ್ಧಿಸುವುದಾಗಿ ದಲಿತ ಮುಖಂಡ ಚಂದ್ರಶೇಖರ್ ಆಜಾದ್ ತಿಳಿಸಿದ್ದಾರೆ
ಚಂದ್ರಶೇಖರ್ ಆಜಾದ್ ಭೀಮ್ ಆರ್ಮಿ ಮುಖ್ಯಸ್ಥ ಮತ್ತು ಕಾರ್ಯಕರ್ತ. 35 ವರ್ಷದ ಆಜಾದ್ ಭೀಮ್ ಆರ್ಮಿಯ ನಾಯಕನಾಗಿದ್ದು, ದಲಿತರು ಶಿಕ್ಷಣದ ಮೂಲಕ ಬಡತನದಿಂದ ಪಾರಾಗಲು ಶಾಲೆಗಳನ್ನು ನಡೆಸುತ್ತಿದ್ದಾರೆ. ಇವರಿಗೆ ‘ರಾವಣ’ ಎಂಬ ಹೆಸರೂ ಇದೆ. ಇವರು ಜಾತಿ ಆಧಾರಿತ ಹಿಂಸಾಚಾರದ ಬಲಿಪಶುಗಳನ್ನು ರಕ್ಷಿಸಲು ಮತ್ತು ತಾರತಮ್ಯದ ವಿರುದ್ಧ ಪ್ರಚೋದನಕಾರಿ ಪ್ರದರ್ಶನಗಳನ್ನು ಆಯೋಜಿಸುತ್ತಾರೆ. ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಗಟ್ಟಿ ಧ್ವನಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು 2019ರಲ್ಲಿ ನಾನು ಪ್ರಧಾನಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದೆ. ಆದರೆ ಆ ಸಮಯದಲ್ಲಿ ನನ್ನ ಬಳಿ ಯಾವುದೇ ಪಕ್ಕ ಇರಲಿಲ್ಲ. ಮಾಯಾವತಿ (ಬಹುಜನ ಸಮಾಜ ಪಕ್ಷದ ಮುಖ್ಯಸ್ಮ) ನನಗೆ ವಿರೋಧ ಪಕ್ಷಗಳ ಮತಗಳನ್ನು ವಿಭಜಿಸುವ ಬದಲು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವುದು ಉತ್ತಮ ಎಂದು ಹೇಳಿದ್ದರು” ಎಂದು ಚಂದ್ರಶೇಖರ್ ಆಝಾದ್ ಪ್ರತಿಕ್ರಿಯಿಸಿದ್ದರು.
ಉತ್ತರಪದೇಶ ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ, ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಇರಬಾರದು ಎಂಬುದು ನನಗೆ ಮುಖ್ಯವಾಗಿದೆ. ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ. ಅಲ್ಲದೆ ನಾವು ಸ್ವಂತವಾಗಿ ಚುನಾವಣೆಗೆ ಸ್ಪರ್ಧಿಸಿದರೆ ದಲಿತರು, ಮುಸ್ಲಿಮರು ಅಥವಾ ಹಿಂದುಳಿದ ಜಾತಿಗಳ ಅಭ್ಯರ್ಥಿಗಳನ್ನು ಎಲ್ಲಿ ಬೇಕಾದರೂ ನಿಲ್ಲಿಸುತ್ತೇವೆ ಎಂದು ಆಝಾದ್ ಹೇಳಿದರು.