ಉತ್ತರಪ್ರದೇಶದಲ್ಲಿ ಚುನಾವಣೆಯ ಫಲಿತಾಂಶ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೇ ಅಧಿಕಾರಕ್ಕೇರಿದೆ. ಆ ಮೂಲಕ ಸತತ ಎರಡು ಬಾರಿ ಅಧಿಕಾರಕ್ಕೇರಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಲ್ಲಿಯವರೆಗೂ ಯಾವುದೇ ಮುಖ್ಯಮಂತ್ರಿ ಸತತ ಎರಡು ಬಾರಿ ಅಧಿಕಾರ ಹಿಡಿದ ಇತಿಹಾಸ ಉತ್ತರಪ್ರದೇಶದಲ್ಲಿಲ್ಲ. ಅಂತಹದೊಂದು ಹೊಸ ಇತಿಹಾಸವನ್ನು ಯೋಗಿ ಬರೆದಿದ್ದಾರೆ.

ಇನ್ನು ಭಾರತದ ಅತ್ಯಂತ ಹೆಚ್ಚು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶವನ್ನು ರಾಜಕೀಯವಾಗಿ ಗೆಲ್ಲುವುದು ಅತಿ ಮುಖ್ಯವಾಗಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕಾದರೆ ಉತ್ತರಪ್ರದೇಶದಲ್ಲಿ ಮೊದಲು ಅಧಿಕಾರ ಹಿಡಿಯಬೇಕು. ಹೀಗಾಗಿಯೇ “ದೆಹಲಿ ಗದ್ದುಗೆಯ ಹಾದಿ, ಲಖನೌ ಮೂಲಕ ಹಾದು ಹೋಗುತ್ತದೆ” ಎಂಬ ಮಾತಿದೆ. ಈ ಸತ್ಯವನ್ನು ಅರಿತಿರುವ ಕೇಂದ್ರ ಬಿಜೆಪಿ ನಾಯಕರು ಸಾಕಷ್ಟು ಶ್ರಮವಹಿಸಿ ಉತ್ತರಪ್ರದೇಶದಲ್ಲಿ ಮತ್ತೇ ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ.
ಅಖಿಲೇಶ್ ಯಾದವ್ ಸಾಕಷ್ಟು ಪೈಪೋಟಿ ನೀಡಿದರು. ಉತ್ತರಪ್ರದೇಶವನ್ನು ಗೆದ್ದು ಬೀಗುವಲ್ಲಿ ಯೋಗಿ ಆದಿತ್ಯನಾಥ್ ಯಶಸ್ವಿಯಾಗಿದ್ದಾರೆ. ಇನ್ನು ಕಳೆದ ಬಾರಿ ಉತ್ತರಪ್ರದೇಶದಲ್ಲಿ ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಚುನಾವಣೆ ಎದುರಿಸಿತ್ತು. ಆಗ ಉತ್ತರಪ್ರದೇಶದಲ್ಲಿ ಕಮಾಲ್ ಮಾಡಿದ್ದು, ಮೋದಿ ಮಾತ್ರ. ಹೌದು, 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮೋದಿ ಮಾತ್ರ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಂಡಿದ್ದರು. ಮತದಾರರು ಮೋದಿ ಮುಖ ನೋಡಿ ಮತ ಚಲಾಯಿಸಿದ್ದರು. ಆದರೆ ಈ ಬಾರಿ ಮೋದಿ-ಯೋಗಿ ಜೋಡಿ ಕಮಾಲ್ ಮಾಡಿದೆ.

ಉತ್ತರಪ್ರದೇಶದಲ್ಲಿ ‘ಬುಲ್ಡೋಜರ್ ಬಾಬಾ’ ಎಂದೇ ಖ್ಯಾತಿ ಗಳಿಸಿರುವ ಯೋಗಿ ಆಡಳಿತಕ್ಕೆ ಮತದಾರರು ಜೈ ಎಂದಿದ್ದಾರೆ. ತಮ್ಮ ಪ್ರಕಾರ ಹಿಂದುತ್ವ, ಭ್ರಷ್ಟಾಚಾರ ರಹಿತ ಆಡಳಿತ, ಯಾವುದೇ ಒತ್ತಡಗಳಿಗೆ ಒಳಗಾಗದೇ ಕಾರ್ಯನಿರ್ವಹಿಸುವ ಯೋಗಿ ಮಾತಿಗೆ ಮತದಾರರು ಬಹುಪರಾಕ್ ಹೇಳಿದ್ದಾರೆ. ಉತ್ತರದ ಗದ್ದುಗೆ ಹಿಡಿಯುತ್ತಲೇ, ಯೋಗಿ ಆದಿತ್ಯನಾಥ್‍ರ ವರ್ಚಸ್ಸು ಇಡೀ ರಾಷ್ಟ್ರಮಟ್ಟದಲ್ಲಿ ಇಮ್ಮಡಿಯಾಗಿದೆ. ಇನ್ನು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಿಂದ ಮೋದಿ ಹಿಂದೆ ಸರಿದರೆ, ‘ಮೋದಿ’ಗೆ ಪರ್ಯಾಯ ನಾಯಕನಾಗಿ ‘ಯೋಗಿ’ ಉದಯಿಸಿದ್ದಾರೆ.

ಈಗಾಗಲೇ ಅಂತಹದೊಂದು ವೇದಿಕೆಯೂ ರೂಪಗೊಳ್ಳುತ್ತಿದೆ. ರಾಷ್ಟ್ರಮಟ್ಟದಲ್ಲಿ ಯೋಗಿ ಹಿಂದೂ ಮತಬ್ಯಾಂಕ್‍ನ್ನು ಒಗ್ಗೂಡಿಸುವ ವರ್ಚಸ್ಸು ಹೊಂದಿದ್ದಾರೆ. ಸದ್ಯ ಕೇಂದ್ರ ಬಿಜೆಪಿಯಲ್ಲಿ ಮೋದಿ-ಅಮಿತ್ ಶಾ ಜೋಡಿ ಬಿಟ್ಟರೆ, ಯೋಗಿ ಹೆಚ್ಚು ಪ್ರಬಲರಾಗಿ ಕಾಣುತ್ತಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಯೋಗಿಗೆ ದಕ್ಕಿರುವ ಈ ಗೆಲುವು, ಅವರನ್ನು ದೆಹಲಿ ಗದ್ದುಗೆಯ ಸನಿಹಕ್ಕೆ ತೆಗೆದುಕೊಂಡು ಹೋಗಬಹುದು. ಕಾವಿಧಾರಿಯೊಬ್ಬ ಪ್ರಧಾನಿ ಗದ್ದುಗೆ ಅಲಂಕರಿಸಿದರೆ ಅಚ್ಚರಿ ಪಡಬೇಕಿಲ್ಲ.