ಚಿಕ್ಕ ಮಗುವಿನಿಂದ ಹಿಡಿದು ಹಿರಿಯರವರೆಗೂ ಈ ಯೂಟ್ಯೂಬ್ ಎಂಬುದು ಬೇಕೇ ಬೇಕು ಎನ್ನುವಂತಾಗಿದೆ! ಏಕೆಂದರೆ ಇದು ಯೂಟಬ್ ಜಗತ್ತು, ಸಾಮಾಜಿಕ ಜಾಲತಾಣದ ಜಗತ್ತು. ಇಲ್ಲಿ ಯಾವ ವಿಷಯ ಸಿಗುವುದಿಲ್ಲ ಹೇಳಿ, ಎಲ್ಲವೂ ಇಲ್ಲಿ ಲಭ್ಯವಿದೆ. ಕೆಲವರಂತೂ ಪ್ರತಿಯೊಂದಕ್ಕೂ ಯೂಟ್ಯೂಬನ್ನೇ
ಅಲಂಬಿಸಿಕೊಂಡಿದ್ದಾರೆ.

ಅಡುಗೆ , ಆಟ, ಊಟ, ಪಾಠ, ಎಲ್ಲವನ್ನು ಇಲ್ಲಿ ಕಾಣಬಹುದು. ಆಧುನಿಕ ವಿಚಾರದಿಂದ ಹಿಡಿದು ಹಳೆಯ, ಐತಿಹಾಸಿಕ ವಿಚಾರಗಳ ಬಗ್ಗೆಯು ಯೂಟ್ಯೂಬ್ ಮಾಹಿತಿಯನ್ನು ನೀಡುತ್ತದೆ. ಯೂಟ್ಯೂಬ್ ಅನ್ನು ಫೆಬ್ರವರಿ 14, 2005 ರಂದು ಸ್ಟೀವ್ ಚೆನ್, ಚಾಡ್ ಹರ್ಲಿ ಮತ್ತು ಜಾವೇದ್ ಕರೀಮ್, ಅಮೇರಿಕನ್ ಇ-ಕಾಮರ್ಸ್ ಕಂಪನಿ ಪೇಪಾಲ್‌ನ ಮೂವರು ಮಾಜಿ ಉದ್ಯೋಗಿಗಳು ಪ್ರಾರಂಭ ಮಾಡುತ್ತಾರೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಸ್ಯಾನ್ ಬ್ರೂನೋದಲ್ಲಿ ಇದೆ.
ಯೂಟ್ಯೂಬ್ ನಲ್ಲಿ ಮೊದಲು ಅಪ್‌ಲೋಡ್ ಆಗಿರುವ ವಿಡಿಯೋ ಯಾವುದು ಗೊತ್ತಾ?
ಈ ಬಗ್ಗೆ ಒಂದು ಕುತೂಹಲಭರಿತ ಸ್ಟೋರಿ ಇಲ್ಲಿದೆ. ಯೂಟ್ಯೂಬ್ ನಲ್ಲಿ ಮೊದಲು ಅಪ್ ಲೋಡ್ ಆಗಿರುವ ವಿಡಿಯೋ ಮತ್ತು ಅದನ್ನು ಅಪ್ ಲೋಡ್ ಮಾಡಿದ ವ್ಯಕ್ತಿ ಯಾರು ಗೊತ್ತಾ? ತಿಳಿಯಲು ಮುಂದೆ ಓದಿ. ಮೊದಲ YouTube ವೀಡಿಯೊವನ್ನು ಏಪ್ರಿಲ್ 23, 2005 ರಂದು ಅಪ್‌ಲೋಡ್ ಮಾಡಲಾಯಿತು. ಅದು ಅಪ್ ಲೋಡ್ ಆಗಿ ಇವತ್ತಿಗೆ ಸುಮಾರು 17 ವರ್ಷಗಳು ಉರುಳಿವೆ. ಇದನ್ನು ಅಪ್ಲೋಡ್ ಮಾಡಿದ ವ್ಯಕ್ತಿ ಯೂಟ್ಯೂಬ್ ಸಹ-ಸಂಸ್ಥಾಪಕ. ಹೌದು, ಜಾವೇದ್ ಕರೀಮ್ ಅವರು ಮೊಟ್ಟ ಮೊದಲಿಗೆ 18 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದರು, “Me at the zoo” ಶೀರ್ಷಿಕೆಯಡಿಯಲ್ಲಿ ಅಪ್ ಲೋಡ್ ಮಾಡಿದ್ದರು.

ಆ ವಿಡಿಯೋ ಇಂದಿಗೆ 90 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇಂದಿಗೂ ಇದು ಕರೀಮ್‌ನ ಚಾನೆಲ್‌ನಲ್ಲಿರುವ ಏಕೈಕ ವೀಡಿಯೊವಾಗಿದೆ! ಯೂಟ್ಯೂಬ್ ಅಲ್ಲಿಂದ ಇಲ್ಲಿಯವರೆಗೆ ಕೋಟಿ ಕೋಟಿ ವೀಕ್ಷಕರನ್ನು ಪಡೆದುಕೊಂಡಿದೆ. ಯೂಟ್ಯೂಬ್ ಇಂದು ಜಗತ್ತಿನಲ್ಲಿರೋ ಎಲ್ಲರಿಗೂ ಒಂದು ಮಾಹಿತಿಯ ಗ್ರಂಥದಂತೆ ಆಗಿದೆ. ಪ್ರತಿಯೊಬ್ಬರಿಗೂ ಬೇಕಾದ ಮಾಹಿತಿಯನ್ನು ನೀಡುವ ಕಾರ್ಯವನ್ನು ಮಾಡುತ್ತದೆ.
ಯೂಟ್ಯೂಬ್ ಎಲ್ಲ ಮಾಹಿತಿಯನ್ನು ನೀಡುವುದರ ಜೊತೆಗೆ ಲಕ್ಷಾಂತರ ಜನರಿಗೆ ಯೂಟ್ಯೂಬ್ ಚಾನಲ್ ಮಾಡಲು ಅವಕಾಶವನ್ನು ನೀಡಿದೆ ಜೊತೆಗೆ ಸಂಪಾದನೆಗೂ ಒಂದು ಬೃಹತ್ ವೇದಿಕೆಯಾಗಿದೆ.