ಬೆಳಗಾವಿ : ಕಾಂಗ್ರೆಸ್ ಶಾಸಕ(Congress MLA) ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರು ಜಾತಿ, ಧರ್ಮ ನೋಡದೇ ಎಲ್ಲ ಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಧರ್ಮ ನೋಡದೇ ಎಲ್ಲ ಧರ್ಮದವರಿಗೂ ಸಹಾಯ ಮಾಡುತ್ತಾರೆ. ಹೀಗಾಗಿ ಅವರು ತಮ್ಮ ಕ್ಷೇತ್ರದಲ್ಲಿ ಎಲ್ಲ ಧರ್ಮದವರ ಜೊತೆ ಉತ್ತಮ ಬಾಂಧವ್ಯ ಸಾಧಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಮೀರ್ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಶ್ರೀ ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಬೆಳಗಾವಿ(Belagavi) ಜಿಲ್ಲೆಯ ಸವದತ್ತಿ ತಾಲೂಕಿನ, ಯಕ್ಕುಂಡಿ ಗ್ರಾಮದ ದೀಲಾವರ್ ದರ್ಗಾದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಯಕ್ಕುಂಡಿ ಗ್ರಾಮದ ದೀಲಾವರ್ ದರ್ಗಾಕ್ಕೆ ಸಾವಿರಾರೂ ವರ್ಷಗಳ ಇತಿಹಾಸವಿದೆ. ನೂರಾರು ವರ್ಷಗಳಿಂದ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿ ದೀಲಾವರ್ ದರ್ಗಾ ಯಕ್ಕುಂಡಿ ಗ್ರಾಮದಲ್ಲಿದೆ. ಈ ದೀಲಾವರ್ ದರ್ಗಾ ಹಿಂದೂ ಧರ್ಮೀಯರಾದ ಶ್ರೀ. ಶಂಕರ ಪಾಟೀಲ್ ಅವರಿಂದ ಅಭಿವೃದ್ಧಿಯಾಗಿದೆ. ಹೀಗಾಗಿ ಇದು ಎಲ್ಲ ಧರ್ಮದವರ ಶ್ರದ್ಧೆಯ ಕೇಂದ್ರವಾಗಿದೆ.
ಇನ್ನು ಬೆಂಗಳೂರಿನಿಂದ ದೀಲಾವರ್ ದರ್ಗಾಕ್ಕೆ ಕಾಂಗ್ರೆಸ್ ನಾಯಕರಾದ ಜಮೀರ್ ಅಹ್ಮದ್ ಖಾನ್ ಬಂದಿದ್ದಾರೆ. ಇದರ ಶಕ್ತಿ ಎಷ್ಟಿದೆ ಎನ್ನುವುದನ್ನು ನೀವು ವಿಚಾರ ಮಾಡಬೇಕು ಎಂದರು.
ಇನ್ನು ಮುಂದೊಂದು ದಿನ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಈಗಾಗಲೇ ಅವರು ಯಾವುದೇ ಜಾತಿ, ಧರ್ಮ ನೋಡದೇ ಶಾಸಕರಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ರಾಜ್ಯದ ಜನತೆ ಅವರ ಸೇವೆಯನ್ನು ಗಮನಿಸುತ್ತಿದ್ದಾರೆ. ಹೀಗಾಗಿಯೇ ಅವರು ಈಗ ಜನಪ್ರಿಯ ಶಾಸಕರಾಗಿದ್ದಾರೆ. ಮುಂದಿನ ಬಾರಿ ಅವರು ಮಂತ್ರಿಗಳಾಗಿ ನಮ್ಮ ವಿರಕ್ತಮಠಕ್ಕೆ ಬರಬೇಕು.
ಒಳ್ಳೆಯ ಮನಸ್ಸಿನ ಮತ್ತು ಜನಪರ ಸೇವೆಗಳನ್ನು ಮಾಡುತ್ತಿರುವ ಜಮೀರ್ ಅಹಮದ್ ಖಾನ್ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಬೇಕು. ಇದರ ಜೊತೆಗೆ ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ಕೂಡಾ ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ೨೦೨೩ರ ಚುನಾವಣೆಯಲ್ಲಿಯೂ ಮಹಾಂತೇಶ ಕೌಜಲಗಿ ಆರಿಸಿ ಬರಬೇಕು ಎಂದು ಹಾರೈಸಿದರು.