ಬೆಂಗಳೂರು : ಚಾಮರಾಜಪೇಟೆಯ(Chamrajpete) ಈದ್ಗಾ ಮೈದಾನ(Edga Grounds) ವಿವಾದಕ್ಕೆ ಇದೀಗ ಸ್ಥಳೀಯ ಶಾಸಕ(MLA) ಜಮೀರ್ ಅಹಮ್ಮದ್ ಖಾನ್(Zameer Ahmed Khan)ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನಗಳಿಂದ ವಿವಾದ ಬುಗಿಲೆದ್ದಿದ್ದರೂ, ಮೌನವಾಗಿದ್ದ ಶಾಸಕ ಜಮೀರ್ ಅಹಮ್ಮದ್ ಖಾನ್ ಇದೀಗ ತಮ್ಮ ನಿಲುವನ್ನು ತಿಳಿಸಿದ್ದು, ಮೈದಾನ ಈದ್ಗಾ ಮೈದಾನವಾಗಿಯೂ ಇರುತ್ತೆ. ಆಟದ ಮೈದಾನವಾಗಿಯೂ ಇರುತ್ತೆ. ನಾನು ಶಾಸಕ ಸ್ಥಾನದಲ್ಲಿ ಇರುವವರೆಗೂ ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈದ್ಗಾ ಮೈದಾನ ವಿವಾದದ ಕುರಿತು ಮಾತನಾಡಿರುವ ಅವರು, ಈದ್ಗಾ ಮೈದಾನವನ್ನು ಆಟದ ಮೈದಾನವಾಗಿಯೂ ಬಳಸಬಹುದು. ಜೊತೆಗೆ ಅದು ಈದ್ಗಾ ಮೈದಾನವಾಗಿಯೂ ಇರುತ್ತದೆ. ಆಟದ ಮೈದಾನವನ್ನು ತೆಗೆಯುವುದಿಲ್ಲ. ಅಲ್ಲಿ ಎಲ್ಲ ಧರ್ಮದವರು ಆಟವಾಡಬಹುದು. ಇನ್ನು ಈ ವಿವಾದದ ಕುರಿತು ಸ್ಥಳೀಯರು ಸಭೆ ನಡೆಸಿದ್ದಾರೆ ಎಂದು ನನಗೆ ಮಾಹಿತಿ ಬಂದಿದೆ. ಆದರೆ ಸಭೆಯ ಉದ್ದೇಶ ಏನೆಂದು ನನಗೆ ಸ್ಪಷ್ಟವಾಗಿಲ್ಲ. ಆಟದ ಮೈದಾನ ಉಳಿಸಿ ಎಂದು ಸಭೆ ನಡೆಸಿ, ಜುಲೈ ೧೨ ರಂದು ಚಾಮರಾಜಪೇಟೆ ಬಂದ್ಗೆ ಕರೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಆಟದ ಮೈದಾನ ತೆಗೀತಾರೆ ಎಂದು ಯಾರು ಹೇಳಿದ್ದಾರೆ?
ಅಲ್ಲಿರುವ ಆಟದ ಮೈದಾನವನ್ನು ತೆಗೆಯುವುದಿಲ್ಲ. ಅದೇ ರೀತಿ ಈದ್ಗಾ ಮೈದಾನವನ್ನೂ ತೆಗೆಯುವುದಿಲ್ಲ ಎಂದು ಜಮೀರ್ ಅಹಮ್ಮದ್ ಖಾನ್ ತಿಳಿಸಿದ್ದಾರೆ. ಇನ್ನು ಚಾಮರಾಜಪೇಟೆಯಲ್ಲಿ ಕಳೆದ ಅನೇಕ ದಶಕಗಳಿಂದ ಕೋಮು ಗಲಭೆಗಳಾಗುತ್ತಿದ್ದವು. ಆದರೆ ನಾನು ಶಾಸಕನಾದ ಮೇಲೆ ಚಾಮರಾಜಪೇಟೆಯಲ್ಲಿ ಯಾವುದೇ ಗಲಭೆ ನಡೆದಿಲ್ಲ. ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದವರು ಇಲ್ಲಿ ಶಾಂತಿ ಮತ್ತು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ ಎಂದರು.

ಈ ನಡುವೆ ಈದ್ಗಾ ಮೈದಾನ ವಿವಾದ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಬಿಬಿಎಂಪಿ(BBMP) ಕಮಿಷನರ್ ಈದ್ಗಾ ಮೈದಾನ ಪಾಲಿಕೆಯ ಸ್ವತ್ತಲ್ಲ ಎಂದಿದ್ದರು. ಇನ್ನು ವಕ್ಫ್ ಬೋರ್ಡ್, ಇದು ತಮ್ಮ ಜಾಗ ಎಂದು ಹೇಳಿತ್ತು. ಹೀಗಾಗಿ ಈ ಜಾಗ ಯಾರಿಗೆ ಸೇರಬೇಕು ಎಂಬ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ವಿವಾದಕ್ಕೆ ಕಾರಣವಾಗಿದೆ. ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಮುಂದುವರೆಯಬೇಕೆಂದು ಆಗ್ರಹಿಸಿ, ಚಾಮರಾಜಪೇಟೆಯ ಜಂಗಮ ಮಂಟಪದಲ್ಲಿ ಸ್ಥಳೀಯರು ಸಭೆ ನಡೆಸಿ, ಜುಲೈ ೧೨ ರಂದು ಚಾಮರಾಜಪೇಟೆ ಬಂದ್ಗೆ ತೀರ್ಮಾನಿಸಿದ್ದಾರೆ.