ಚೆನೈ: ಹಿರಿಯ ಗಾಯಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (74) ಅವರು ಶುಕ್ರವಾರ ವಿಧಿವಶರಾಗಿದ್ದಾರೆ.
ಹಲವು ದಿನಗಳಿಂದ ಎಂಜಿಎಂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್‌ಪಿಬಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತಜ್ಞ ವೈದ್ಯರ ತಂಡದಿಂದ ಆರೈಕೆ ಮಾಡಲಾಗುತ್ತಿತ್ತು. ಆಗಸ್ಟ್ 24ರಂದು ಕೊರೊನಾ ವರದಿ ನೆಗೆಟಿವ್ ಬಂದಿತ್ತು.
ಆಗಸ್ಟ್ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೋವಿಡ್–19 ಸೋಂಕಿನ ಲಕ್ಷಣಗಳಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಆಗುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಆ ಬಳಿಕದಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕವೇ ಅವರಿಗೆ ಚಿಕಿತ್ಸೆ ನಿಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮೃತ ಅಂತ್ಯಕ್ರಿಯೆ ಚೆನ್ನೈನ ಫಾರ್ಮ್ ಹೌಸ್ ನಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಜುಲೈನಲ್ಲಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿ ವೈರಮುತ್ತು ರಚಿಸಿದ್ದ ಹಾಡಿಗೆ ಧ್ವನಿ ನೀಡಿದ್ದರು. ಇವರ ಕಲಾ ಸೇವೆಗೆ ಭಾರತ ಸರ್ಕಾರ 2011ರಲ್ಲಿ ಪದ್ಮಶ್ರೀ, 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು.
1946ರ ಜೂನ್ 4 ರಂದು ಜನಿಸಿದ್ದ ಎಸ್‌ಪಿಬಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿದ್ದಾರೆ.