ಭಿಕ್ಷುಕ ಮತ್ತು ಕುಡುಕನ ಪಾತ್ರಗಳಿಗೆ ವೈಜನಾಥ ಬೀರಾದಾರ್ ಅವರಂತೆ ಜೀವ ತುಂಬುವ ಮತ್ತೋರ್ವ ನಟ ಕನ್ನಡದಲ್ಲಿ ಇಲ್ಲ. ಬಹುಶಃ ಅದೇ ಕಾರಣಕ್ಕೆ ಇರಬೇಕು ಅವರಿಗೆ ಅಂಥ ಪಾತ್ರಗಳೇ ಪದೇ ಪದೇ ದೊರಕುತ್ತವೆ. ಈ ಸಂದರ್ಭದಲ್ಲಿ ’90 ಹೊಡಿ ಮನೀಗ್ ನಡಿ’ ಎನ್ನುವ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಸಾಮಾನ್ಯವಾಗಿ ನೈಂಟಿ ಕುಡಿದು ಬೀದಿಯಲ್ಲೇ ಬೀಳುವ ಪಾತ್ರ ಮಾಡುವ ಬೀರಾದಾರ್ ಈ ಬಾರಿ ಮನೆಗೆ ನಡಿ ಎಂದಿದ್ದಾರೆ! ಅಂದರೆ ಕುಡಿದು ಮನೆಗೆ ಹೋಗುತ್ತಾರ? ಹೋದ ಮೇಲೆ ಅಲ್ಲಿ ಏನು ನಡೆಯುತ್ತದೆ ಎನ್ನುವ ಕುತೂಹಲ ಶೀರ್ಷಿಕೆಯಲ್ಲೇ ಇದೆ. “ಮದ್ಯಪಾನದಿಂದಾಗುವ ದುಷ್ಪರಿಣಾಮಗಳನ್ನು ಮನೋರಂಜನೆಯ ಮೂಲಕ ಉತ್ತಮ ಸಂದೇಶ ಹೇಳುವ ಕಥಾಹಂದರ ಈ ಚಿತ್ರದಲ್ಲಿದೆ” ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಅರೆಹೊಳೆ.
ಅವರು ಈ ಹಿಂದೆ ‘ಹಾರೋ ಹಕ್ಕಿ’ ಹಾಗೂ ‘ಕೀಟ್ಲೆ ಕೃಷ್ಣ’ ಎಂಬ ಮಕ್ಕಳ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದುವರೆಗೆ ಸಿನಿಮಾದ ಅರ್ಧಭಾಗದಷ್ಟು ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿತ್ತು. ಪ್ರಸ್ತುತ ಬೆಂಗಳೂರು, ಬಿಡದಿ ಮೊದಲಾದೆಡೆಗಳಲ್ಲಿ ಶೂಟಿಂಗ್ ಸಾಗಿದೆ.
`ಕನಸೆಂಬ ಕುದುರೆಯನೇರಿ’ ಚಿತ್ರದ ಅಭಿನಯಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ನಟ ವೈಜನಾಥ್ ಬಿರಾದಾರ್ ಅವರಿಗೆ ’90 ಹೊಡಿ ಮನೀಗ್ ನಡಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಇವರ ಅಭಿನಯದ 500ನೇ ಚಿತ್ರ. ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ ಲಾಂಛನದಲ್ಲಿ ರತ್ನಮಾಲ ಬಾದರದಿನ್ನಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಕಥೆ ಹಾಗೂ ಸಂಭಾಷಣೆ ಉಮೇಶ್ ಬಾದರದಿನ್ನಿ ಅವರು ಬರೆದರೆ, ಚಿತ್ರಕಥೆಯನ್ನು ಇಬ್ಬರು ನಿರ್ದೇಶಕರು ಸೇರಿ ರಚಿಸಿದ್ದಾರೆ. ಈ ಹಿಂದೆ ‘ಬಿಡಲಾರೆ ಎಂದೂ ನಿನ್ನ’ ಚಿತ್ರ ನಿರ್ದೇಶಿಸಿದ್ದ ಉಮೇಶ ಬಾದರದಿನ್ನಿ ಅವರಿಗೆ ಇದು ಎರಡನೇ ಚಿತ್ರ.
ಚಿತ್ರದಲ್ಲಿ ಮೂರು ಹಾಡುಗಳಿದ್ದು,ಕಿರಣ್ ಶಂಕರ್ – ಶಿವು ಭೇರಗಿ ಸಂಗೀತ ನಿರ್ದೇಶನವಿದೆ. ವಿ.ನಾಗೇಂದ್ರ ಪ್ರಸಾದ್ ಎರಡುಹಾಡುಗಳನ್ನು ಹಾಗೂ ಶಿವು ಭೇರಗಿ ಒಂದುಹಾಡನ್ನು ಬರೆದಿದ್ದಾರೆ.
ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ udv ಸಂಕಲನ, ರಾಜಾರಮೇಶ್ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ವೈಜನಾಥ್ ಬಿರಾದಾರ್ ಜತೆಗೆ ಕರಿಸುಬ್ಬು, ಧರ್ಮ, ನೀತು, ಪೂಜಾ, ಅಭಯ್ ವೀರ್, ಪ್ರಶಾಂತ್ ಸಿದ್ದಿ, ಆರ್ ಡಿ ಬಾಬು, ವಿವೇಕ್ ಜಂಬಗಿ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.