ಬೆಳಗಾವಿ:ಅ 12: ಸ್ಯಾಂಡಲ್ ವುಡ್ ನ ಖ್ಯಾತ ಚಿತ್ರ ಸಾಹಿತಿ ಕೆ ಕಲ್ಯಾಣ್ ಅವರ ಸಂಸಾರದಲ್ಲಿ ಹುಳಿಹಿಂಡಿ, ಕೋಟ್ಯಾಂತರ ರೂಪಾಯಿ ಲಪಟಾಯಿಸಿದ ಮಂತ್ರವಾದಿ ಶಿವಾನಂದ ವಾಲಿ ಪೊಲೀಸರ ಅಥಿತಿಯಾಗಿದ್ದಾನೆ. ಆತನಿಂದ ಪೊಲೀಸರು ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಡಿಸಿಪಿ ವಿಕ್ರಮ್ ಅಮಟೆ ಅವರು ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಕೆ ಕಲ್ಯಾಣ್ ಕುಟುಂಬದ ಸಮಸ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ ವಾಲಿ ವಿರುದ್ಧ ಚೀಟಿಂಗ್ ಮತ್ತು ಅಪಹರಣ ಕೇಸ್ ದಾಖಲಾಗಿತ್ತು.
ಶಿವಾನಂದ ವಾಲಿ ಎಂಬ ಮಂತ್ರವಾದಿಯನ್ನು ವಿಚಾರಣೆಗೊಳಪಡಿಸಿದಾಗ ಕೆ ಕಲ್ಯಾಣ್ ಪತ್ನಿಗೆ ಕಂಟಕವಿದೆ ಇದನ್ನು ಸರಿಪಡಿಸುವೆ ಎಂದು ಹೇಳಿ, ಮನೆ ಕೆಲಸದಾಳು ಗಂಗಾ ಕುಲಕರ್ಣಿಯನ್ನು ಬಳಸಿ ಹಣ ಲಪಟಾಯಿಸಿದ್ದಾನೆ. ಆರೋಪಿಯು ಇದುವರೆಗೆ 350 ಗ್ರಾಂ ಚಿನ್ನ. 6 ಕೆ ಗಿ ಬೆಳ್ಳಿ, ಹಾಗೂ ಅನೇಕ ಕಡೆಗಳಲ್ಲಿ 5 ರಿಂದ 6 ಕಕೋಟಿ ಆಸ್ಥಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾನೆ.
ಶಿವಾನಂದ ವಾಲಿಯನ್ನು ವಶಕ್ಕೆ ಪಡೆದ ಪೊಲೀಸರು ಕಳೆದ 6 ದಿನಗಳಿಂದ ತನಿಖೆ ಮಾಡುತ್ತಿದ್ದಾರೆ ಈ ಹಿಂದೆ ಕಲ್ಯಾಣ್ ಪತ್ನಿ ಹಾಗೂ ಅತ್ತೆ ಮಾವನವರ ಜೀವಕ್ಕೆ ಅಪಾವಿದೆ ಎಂದು ಅವರನ್ನು ಹೆದರಿಸಿ ಹಣ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಹುಬ್ಬಳ್ಳಿ, ಧಾರವಾಡ,ಬೆಂಗಳೂರು ಬೆಳಗಾವಿ ಸೇರಿದಂತೆ 6 ಆಸ್ತಿಗಳಲ್ಲಿ ಎರಡನ್ನು ಶಿವಾನಂದ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆಂದು ಡಿಸಿಪಿ ಅಮಟೆ ತಿಳಿಸಿದರು.
ವಾಲಿ ವಿರುದ್ಧ ವಾಮಾಚಾರ ಪ್ರತಿಬಂಧಕ ಅಧಿನಿಯಮ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಶಿವಾನಂದ ವಾಲಿ ಮತ್ತು ಗಂಗಾ ಕುಲಕರ್ಣಿ ಪ್ರಮುಖ ಆರೋಪಿಗಳು. ಗಂಗಾ ಕುಲಕರ್ಣೀಯವರ ಬಂಧನಕ್ಕೂ ತಂಡ ವನ್ನು ರಚಿಸಲಾಗಿದೆ ಸಾರ್ವಜನಿಕರು ಇಂತಹ ಮಾಟ ಮಂತ್ರ ನಡೆಸುತ್ತಿರುವ ಬಗ್ಗೆ ಅನುಮಾನ ಬಂದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.