ನವದೆಹಲಿ: ಬಿಹಾರ ವಿಧಾನ ಸಭಾ ಚುನಾವಣೆಗೆ ಇದೇ ಮೊದಲಬಾರಿಗೆ ತೃತೀಯ ಲಿಂಗಿಯೊಬ್ಬರನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
28ರಂದು ನಡೆಯುವ ಚುನಾವಣೆಗೆ ಅಧಿಕಾರಿಯಾಗಿ 32 ವರ್ಷದ ಮೋನಿಕಾ ದಾಸ್ ಅವರನ್ನು ನೇಮಿಸಲಾಗಿದೆ. ಇವರು ಪಾಟ್ನಾ ವಿವಿಯಲ್ಲಿ ಚಿನ್ನದ ಪದಕ ಗೆದ್ದ ವಿದ್ಯಾರ್ಥಿಯಾಗಿದ್ದಾರೆ. 2015 ರಿಂದ ರಾಷ್ಟ್ರೀಕೃತ ಬ್ಯಾಂಕಲ್ಲಿ ಕೆಲಸ ಮಾಡಿದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ರಾಜ್ಯದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ತೃತೀಯ ಲಿಂಗಿ ಅಧಿಕಾರಿಯನ್ನು ನೇಮಕ ಮಾಡಿದ ಐತಿಹಾಸಿಕ ದಾಖಲೆಯನ್ನು ಬಿಹಾರ ಹೊಂದಿದೆ. ಮೋನಿಕಾ ದಾಸ್ ಅವರಿಗೆ ಚುನಾವಣೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಬಿಹಾರ ಚುನಾವಣಾ ಆಯೋಗದ ಆಯುಕ್ತ ಹೆಚ್ ಆರ್ ಶ್ರೀನಿವಾಸ್ ತಿಳಿಸಿದ್ದಾರೆ.