ಪಿಎಸ್ಐ ಒಬ್ಬರು ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಪಿಎಸ್ಐ ಕಿರಣ್ ಕುಮಾರ್ ಆತ್ಮಹತ್ಯೆಗೆ ಶರಣಾದವರು. ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆ ಮುಗಿಸಿ, ತಿಂಡಿ ತಿನ್ನಲು ಮನೆಗೆ ಹೋಗಿದ್ದ ಕಿರಣ್ ಕುಮಾರ್ ಮನೆಯ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಡರಾತ್ರಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬoಧಿಸಿದಂತೆ ಆರೋಪಿಯನ್ನು ಬಂಧಿಸಲು ಎಸ್‌ಐ ಕಾರ್ಯಪ್ರವೃತ್ತರಾಗಿದ್ದರು, ಅಲ್ಲದೆ ನಿನ್ನೆ ನಡೆದಿದ್ದ ಕೊಲೆ ಪ್ರಕರಣವನ್ನು ಕೂಡ ಪಿಎಸ್‌ಐ ಬೇಧಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ದಿನದ ಅಂತರದಲ್ಲಿ ಎರಡು ಕೊಲೆಗಳು ನಡೆದಿವೆ, ಈ ಕೊಲೆಗಳನ್ನು ಬೇಧಿಸುವ ಸಂದರ್ಭದಲ್ಲಿ ಕಿರಣ್ ಕುಮಾರ್ ಸಾಕಷ್ಟು ಒತ್ತಡವನ್ನು ಅನುಭವಿಸಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಕೊಲೆ ಪ್ರಕರಣದ ಸ್ಥಳ ಪರಿಶೀಲನೆಗೆ ಇಂದು ಎಸ್ಪಿ ಹಾಗೂ ಐಜಿ ಆಗಮಿಸಿ ಪರಿಶೀಲನೆ ನಡೆಸುವ ಕಾರ್ಯ ನಿಗದಿಯಾಗಿತ್ತು. ಕರ್ತವ್ಯ ನಿರ್ಲಕ್ಷ್ಯದಿಂದ ಈ ಕೊಲೆಗಳು ನಡೆದಿವೆ ಎಂಬ ಆರೋಪ ತಮ್ಮ ಮೇಲೆ ಬರಲಿದೆ ಎಂಬ ಆತಂಕಕ್ಕೆ ಕಿರಣ್ ಕುಮಾರ್ ಒಳಗಾಗಿದ್ದರು ಎನ್ನಲಾಗಿದೆ.