ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೊರೊನಾ ಮಹಾಮಾರಿ ಆರ್ಭಟ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಆರೋಪ ಪ್ರತ್ಯಾರೋಪ ಮುಂದುವರಿದಿದೆ
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಜ್ಯ ಸರ್ಕಾರ ಕೋವಿಡ್-19 ವಿಚಾರದಲ್ಲಿ ನಮ್ಮ ಬಳಿ ಸಹಕಾರ ಕೇಳಿದ್ದಾರೆ. ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಆದರೆ ಈ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ.
ಬೆಂಗಳೂರಿನಲ್ಲಿ ಒಂಬತ್ತು ಜನ ಮಂತ್ರಿಗಳು ಸೇರಿ ಏನು ಮಾಡುತ್ತಿದ್ದಾರೆ. ಒಬ್ಬ ಮಂತ್ರಿಯೂ ಆಸ್ಪತ್ರೆಗೆ ಹೋಗಲಿಲ್ಲ. ರೋಗಕ್ಕೆ ತುತ್ತಾದವರಿಗೆ ಧೈರ್ಯ ತುಂಬಲಿಲ್ಲ. ಸತ್ತವರನ್ನು ಕೀಳಾಗಿ ನೋಡಿಕೊಂದ್ದೀರಿ. ಬಿಜೆಪಿ ಸರ್ಕಾರದವರು ಕೋವಿಡ್ ಸೋಂಕು ಹರಡಿಸುವುದರ ಜೊತೆಗೆ ಭ್ರಷ್ಟಾಚಾರದ ಸೋಂಕು ಹಂಚಿದರು ಎಂದು ಆರೋಪಿಸಿದರು.
ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಸೋಂಕು ಕಂಡುಬಂದು 110 ದಿನ ಆದ ಮೇಲೆ ಖಾಸಗಿ ಆಸ್ಪತ್ರೆಯವರನ್ನು ಕರೆದು ಮಾತನಾಡುತ್ತಿದ್ದಾರೆ. ಹೋಟೆಲ್ ಉದ್ಯಮದವರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವೃತ್ತಿಪರರಿಗೆ 5000 ರೂ. ಕೊಡುವುದಾಗಿ ಹೇಳಿದ್ದರು. ಶೇ.10 ಜನರಿಗೂ ಅದು ತಲುಪಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಅವರನ್ನು ಕರೆದು ಮಾತನಾಡಲು ಆಗುತ್ತಿಲ್ಲ. ಪೌರ ಕಾರ್ಮಿಕರಿಗೆ ಜೀವನದ ರಕ್ಷಣೆಯಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ನೀವು ಯಾವುದೇ ಅವ್ಯಹಾರ ಮಾಡಿಲ್ಲ ಎಂದಾದರೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆ ಮಾಡಲು, ತಪಾಸಣೆ ಮಾಡಲು ಅವಕಾಶ ಕೊಡಿ. ಅದಕ್ಕೂ ಅನುಮತಿ ನೀಡಲು ನಿಮ್ಮ ಮನಸ್ಸು ಒಪ್ಪುತ್ತಿಲ್ಲವೇ ಎಂದು ಪ್ರಶ್ನಿಸಿದರು.
21 ದಿನದಲ್ಲಿ ಕೋವಿಡ್-19 ಯುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದಿರಿ. ಈಗ 121 ದಿನ ಆಗಿದೆ. ಇದನ್ನು ಆಧುನಿಕ ಭಾರತದ ಕೌರವರ ಲೂಟಿ ಅಂತ ಕರೆಯಬೇಕೆ? ಇಡೀ ದೇಶದಲ್ಲಿ ಕರ್ನಾಟಕ ಕಪ್ಪು ಚುಕ್ಕೆಯಾಗಿದೆ ಎಂದು ಡಿಕೆಶಿ ಆರೋಪಿಸಿದರು.