ವಸಿಷ್ಠ ಸಿಂಹ ನಾಲ್ಕು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಸುದ್ದಿಯಾಗಿದ್ದ ಸಿನಿಮಾ ಕಾಲಚಕ್ರ.ಅದರ ಬಳಿಕ ಗುರುಕಿರಣ್ ಸಂಗೀತದಲ್ಲಿ ಮೂಡಿ ಬಂದ ತರಗೆಲೆ ಸಂಸಾರ ಹಾಡು ಮತ್ತಷ್ಟು ಸುದ್ದಿ ಮಾಡಿತ್ತು. ಇದೀಗ ಟೀಸರ್ ಬಿಡುಗಡೆಯ ಮೂಲಕ ಸದ್ದು ಮಾಡಲು ಹೊರಟಿದೆ ಚಿತ್ರತಂಡ.
ತಮ್ಮ ಕಂಚಿನ ಕಂಠ ಹಾಗೂ ಸಹಜ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ವಸಿಷ್ಠ ಸಿಂಹ `ಕಾಲಚಕ್ರ’ ಚಿತ್ರದಲ್ಲಿ 25 ರಿಂದ 60 ವಯೋಮಾನದಲ್ಲಿ ಬರುವ ನಾಲ್ಕು ಪಾತ್ರಗಳ ನಿರ್ವಹಣೆ ಮಾಡಿದ್ದಾರೆ. ಲಾಕ್ ಡೌನ್ ಗೂ ಮುನ್ನ ಕಿಚ್ಚ ಸುದೀಪಅವರು ಬಿಡುಗಡೆ ಮಾಡಿದ್ದ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸುಮಂತ್ ಕ್ರಾಂತಿ ನಿರ್ಮಾಣ, ರಚನೆ ಹಾಗೂ ನಿರ್ದೇಶನದ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಕೈಲಾಷ್ ಖೇರ್, ಪಂಚಮ್ ಜೀವ ಹಾಡಿದ್ದಾರೆ.
ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.
ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.