ಸ್ಯಾಂಡಲ್ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ಮನೆಯ ಮೇಲೆ ಮಂಗಳವಾರ ಬೆಳಗ್ಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಕರ್ನಾಟಕ ಸೇರಿದಂತೆ ಬಾಲಿವುಡ್ನಲ್ಲಿ ಸಂಚಲನ ಮೂಡಿಸಿರುವ ಡ್ರಗ್ಸ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಈ ಕೇಸ್ನಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದಾರೆ. ಸಂಜನಾ ಗಲ್ರಾನಿ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ.
ಈ ನಡುವೆ ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಆದಿತ್ಯ ಆಳ್ವ ನಿವಾಸದ ಮೇಲೆ ದಾಳಿ ನಡೆಸುವ ನಿಟ್ಟಿನಲ್ಲಿ ಸರ್ಚ್ ವಾರೆಂಟ್ ಪಡೆದು ಹೆಬ್ಬಾಳದ ಬಳಿ ಇರುವ ಆದಿತ್ಯ ಆಳ್ವ ಅವರ ‘ಹೌಸ್ ಆಫ್ ಲೈಫ್’ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ದಾಖಲೆಗಳಿಗೆ ಹುಡುಕಾಟ ನಡೆಸಿದ್ದಾರೆ.
ಬಾಲಿವುಡ್ ಖ್ಯಾತ ನಟ ವಿವೇಕ್ ಒಬೆರಾಯ್ ಅವರ ಹೆಂಡತಿಯ ಸೋದರನಾಗಿರುವ ಆದಿತ್ಯ ಆಳ್ವ ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದ 6ನೇ ಆರೋಪಿಯಾಗಿದ್ದಾರೆ.
ನಟಿ ರಾಗಿಣಿಯ ಬಂಧನವಾದ ಕೂಡಲೇ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೂ ಆತ ಪತ್ತೆಯಾಗಿರಲಿಲ್ಲ. ಇದೀಗ ಅವರ ಮನೆ ಮೇಲೆ ಇನ್ಸ್ಪೆಕ್ಟರ್ ಪುನೀತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹೆಬ್ಬಾಳ ಸಮೀಪದ ಆದಿತ್ಯ ಆಳ್ವ ಅವರ ಮನೆ ಅಂದಾಜು 4 ಎಕರೆ ವಿಸ್ತೀರ್ಣದಲ್ಲಿದೆ. ಮನೆಯ ಆವರಣದಲ್ಲಿಯೇ ರೆಸಾರ್ಟ್ ಸಹ ಇದೆ.
ಸದ್ಯ ಇನ್ಸ್ಪೆಕ್ಟರ್ ಪುನೀತ್ ತಂಡದಿಂದ ಮನೆಯ ಶೋಧ ನಡೆಸಲಾಗುತ್ತಿದೆ. ಸದ್ಯಕ್ಕೆ ಮನೆಯಲ್ಲಿ ಕೆಲಸಗಾರರು ಬಿಟ್ಟರೆ ಉಳಿದವರು ಯಾರೂ ಇಲ್ಲ ಎನ್ನಲಾಗಿದೆ.