ಇಬ್ಬರು ಮಕ್ಕಳೊಂದಿಗೆ ಶಿಕ್ಷಕಿ ಆತ್ಮಹತ್ಯೆ

ದಾವಣಗೆರೆ, ಅಕ್ಟೋಬರ್ 13: ಗಂಡ ಹೆಂಡತಿ ಇಬ್ಬರೂ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾ, ಇಬ್ಬರು ಮಕ್ಕಳೊಂದಿಗೆ ಸುಖಸಂಸಾರ ನಡೆಸುತ್ತಿದ್ದರು. ಆದರೆ ಮನೆ ಕಟ್ಟುವ ವಿಚಾರದಲ್ಲಿ ಆರಂಭವಾದ ಸಣ್ಣ ಜಗಳ  ವಿಕೋಪಕ್ಕೆ ತಿರುಗಿ ಕುಟುಂಬದ ಮೂರು ಜೀವಗಳನ್ನೇ ಬಲಿ  ತೆಗೆದುಕೊಂಡಿದೆ.

ದಾವಣಗೆರೆ ನಗರದ ಜಯನಗರ ನಿವಾಸಿ ಶ್ರೀದೇವಿ (38), ಮಕ್ಕಳಾದ ಹಂಸಿಕಾ (12) ಹಾಗೂ ನೂತನ್‌ (9) ಕಾಲುವೆಗೆ ಹಾರಿ  ಮೃತಪಟ್ಟವರು.  ಪ್ರೌಢಶಾಲೆಯೊಂದರ ಶಿಕ್ಷಕಿಯಾಗಿರುವ ಇವರು ಮನೆ ಕಟ್ಟುವ ವಿಚಾರದಲ್ಲಿ ಪತಿಯೊಂದಿಗೆ ಜಗಳ ಮಾಡಿಕೊಂಡಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

 ‌ನಗರದ ಹೊರವಲಯದ ಎಚ್. ಕಲ್ಪನಹಳ್ಳಿಯ ಕಾಲುವೆ ಬಳಿಗೆ ಸ್ಕೂಟಿಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಬಳಿಕ ವೇಲ್‌ನಿಂದ ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು  ತೆಗೆದು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

Exit mobile version