ಮುಂಬೈ, ನ. 10: ದೇಶದ ಅತಿ ದೊಡ್ಡ ಉಕ್ಕು ಉತ್ಪಾದನಾ ಉದ್ಯಮ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್.ಎ.ಐ.ಎಲ್) ತನ್ನ ಉದ್ಯೋಗಿಗಳಿಗೆ ಅತಿ ಅಪರೂಪದ ಕಡಿಮೆ ಅವಧಿಯ ಕೆಲಸದ ಯೋಜನೆ ಜಾರಿಗೊಳಿಸಿದೆ. ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಲು ಅನುಕೂಲವಾಗುವ ಈ ಯೋಜನೆಗಳು ನವೆಂಬರ್ 1 ರಿಂದ ಜಾರಿಯಾಗಿವೆ ಎಂದು ತಿಳಿಸಿದೆ. ಇದು ಉದ್ಯೋಗಿ ಸ್ನೇಹಿ ಯೋಜನೆಯಾಗಿದೆ.
ಈ ಸೌಲಭ್ಯವು ಕಂಪನಿಯ ಕಾಯಂ ಮಧ್ಯಮ ಶ್ರೇಣಿಯ ನೌಕರರವರೆಗೆ ದೊರೆಯಲಿದ್ದು, ಹೊಸ ಯೋಜನೆಯ ಪ್ರಕಾರ, ವಿವಿಧ ವೇತನ ಸ್ವರೂಪದಲ್ಲಿ ಉದ್ಯೋಗಿಗಳು ವಾರದಲ್ಲಿ ಮೂರು ದಿನ, ದಿನ ಬಿಟ್ಟು ದಿನ, ಪ್ರತಿ ದಿನದ ನಾಲ್ಕು ತಾಸು ಅಥವಾ ಪ್ರತಿ ತಿಂಗಳಲ್ಲಿ ಅರ್ಧ ದಿನಗಳು ಹೀಗೆ ಯಾವ ಸ್ವರೂಪದ ಕೆಲಸವನ್ನು ಬೇಕಾದರೂ ಆರಿಸಿಕೊಳ್ಳಬಹುದಾಗಿದೆ. ಹೊಸ ಸ್ವರೂಪದ ಕೆಲಸದ ಯೋಜನೆ ಆಯ್ದುಕೊಂಡವರಿಗೆ ಎಚ್.ಆರ್.ಎ., ವಸತಿ ಹಾಗೂ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಲಿವೆ.