ಎರಡು ಸ್ತಬ್ಧಚಿತ್ರಗಳಿಗೆ ಸ್ತಬ್ಧವಾಗಲಿದೆ ದಸರಾ

ಮೈಸೂರು, ಅ. 23: ದೇಶದೆಲ್ಲೆಡೆ ನವರಾತ್ರಿಯನ್ನು ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಅದರಲ್ಲೂ ಕರ್ನಾಟಕದಲ್ಲಿನ ವಿಶೇಷತೆ ಎಂದರೆ ಮೈಸೂರು ದಸರಾ. ಮೈಸೂರು ದಸರಾ ಎಂದರೆ ಜಂಬೂ ಸವಾರಿ ಮೆರವಣಿಗೆ. ನಾಡಿನ ಕಲೆ ಸಂಸ್ಕೃತಿ ಬಿಂಬಿಸುವ ಕಲಾ ತಂಡಗಳು ಹಾಗೂ ಟ್ಯಾಬ್ಲೋ ಕೂಡಾ ಮಹತ್ವದ ಸ್ಥಾನ ಪಡೆದಿವೆ. ಸ್ತಬ್ಧಚಿತ್ರಗಳು ದಸರೆ ನೋಡಲು ಬರುವ ಜನರ ಕಣ್ಮನ ಸೆಳೆಯುತ್ತವೆ ಇದನ್ನು ಜನರು ಮುಗಿಬೀಳುತ್ತಾರೆ.  ಪ್ರತಿವರ್ಷ ನಡೆಯುವ ಈ ಸಂಭ್ರಮಕ್ಕೆ ಕೊರೋನಾ ಬ್ರೇಕ್‌ ಹಾಕಿದೆ. ಏಕೆಂದರೆ ಪ್ರತಿ ವರ್ಷದಂತೆ ಹತ್ತಾರು ಸ್ತಬ್ಧ ಚಿತ್ರಗಳು ಈ ಬಾರಿ ಕಣ್ಣಿಗೆ ಬೀಳೋದಿಲ್ಲ. ಕೇವಲ, 2 ಸ್ತಬ್ಧಚಿತ್ರಗಳು ಮಾತ್ರ ಜಂಬೂ ಸವಾರಿಗೆ ಸಾಥ್‌ ನೀಡಲಿವೆ.

ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆಯುತ್ತಿರುವ ನಾಡಹಬ್ಬ ದಸರಾದಲ್ಲಿ ಜಂಬೂ ಸವಾರಿ ಜೊತೆ ಸಾಗಲು 2 ಸ್ತಬ್ಧಚಿತ್ರಗಳನ್ನು ಮಾತ್ರ ಅಂತಿಮಗೊಳಿಸಲಾಗಿದೆ. ಒಂದು ಸ್ತಬ್ಧಚಿತ್ರ ಮೈಸೂರಿನ ಸಂಸ್ಕೃತಿಯ ಪ್ರತೀಕವಾದ ಆನೆ ಬಂಡಿಯನ್ನು ಪ್ರತಿಬಿಂಬಿಸಿದರೆ, ಮತ್ತೊಂದು ಸ್ತಬ್ಧಚಿತ್ರವನ್ನು ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸುವ ರೀತಿಯಲ್ಲಿ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 26 ಸೋಮವಾರದಂದು ಜಂಬೂ ಸವಾರಿ ನಡೆಯಲಿದೆ. ಅಂದು ಮಧ್ಯಾಹ್ನ 2.50 ರಿಂದ 3.20ರ ಅವಧಿಯಲ್ಲಿ ಸಿಎಂ ಯಡಿಯೂರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ಸಿಗಲಿದೆ.

ಸೋಮವಾರ ಮಧ್ಯಾಹ್ನ 3.40 ರಿಂದ ಸಂಜೆ 4.15ರ ಸಮಯದಲ್ಲಿ ಜಂಬೂ ಸವಾರಿಗೆ ಮೆರವಣಿಗೆ ಹೊರಡಲಿದೆ. ಈ ವೇಳೆ ಸಂಪ್ರದಾಯದ ಪ್ರಕಾರ ಚಾಮುಂಡೇಶ್ವರಿ ಮೂರ್ತಿಗೆ ಸಿಎಂ ಯಡಿಯೂರಪ್ಪ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

Exit mobile version