ಎಲಾನ್ ಮಸ್ಕ್ ಆಸ್ತಿ 6,66,000 ಕೋಟಿ ! ಶ್ರೀಮಂತ ನಂ.3

ಅಮೆರಿಕಾ, ನ. 17:  ಎಲಾನ್ ಮಸ್ಕ್ ಅವರು ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ. ಸೋಮವಾರದಂದು ಎಲೆಕ್ಟ್ರಿಕ್ ಕಾರು ತಯಾರಿಕೆ ಕಂಪೆನಿ ಟೆಸ್ಲಾ ಅನ್ನು S&P 500ಕ್ಕೆ ಸೇರ್ಪಡೆ ಮಾಡಲು ಹೆಸರಿಸಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಶತಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಸುದ್ದಿಯಲ್ಲಿದ್ದಾರೆ.

S&P 500ಕ್ಕೆ ಟೆಸ್ಲಾ ಸೇರ್ಪಡೆ ಆಗಲಿದೆ ಸುದ್ದಿಯಿಂದ ನಲವತ್ತೊಂಬತ್ತು ವರ್ಷದ ಎಲಾನ್ ಮಸ್ಕ್ ಆಸ್ತಿಯಲ್ಲಿ ಭರ್ಜರಿ ಏರಿಕೆ ಕಂಡಿದ್ದು, ವಿಶ್ವದ ಮೂರನೇ ಸಿರಿವಂತರಾಗಿದ್ದಾರೆ. ಆ ಮೂಲಕ ಮಾರ್ಕ್ ಝುಕರ್ ಬರ್ಗ್ ಅವರನ್ನು ದಾಟಿದ್ದಾರೆ. ಅಂದ ಹಾಗೆ ಷೇರಿನ ವಹಿವಾಟಿನಿಂದ ಮಸ್ಕ್ ನಿವ್ವಳ ಆಸ್ತಿ 1500 ಕೋಟಿ ಅಮೆರಿಕನ್ ಡಾಲರ್ ದಾಟಿದೆ.

ನ್ಯೂಯಾರ್ಕ್ ನಲ್ಲಿ ಟೆಸ್ಲಾ ಷೇರು ಸಂಜೆ 6.20ರ ಹೊತ್ತಿಗೆ 14 ಪರ್ಸೆಂಟ್ ಹೆಚ್ಚಳವಾಗಿ, 408.09 ಡಾಲರ್ ಗೆ ವಹಿವಾಟು ಮುಗಿಸಿತು. ಆ ಮೂಲಕ ಎಲಾನ್ ಮಸ್ಕ್ ನಿವ್ವಳ ಆಸ್ತಿ 11,700 ಕೋಟಿ ಅಮೆರಿಕನ್ ಡಾಲರ್ ದಾಟಿತು ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಮೂಲಕ ಗೊತ್ತಾಗಿದೆ. ಈ ವರ್ಷದಲ್ಲೇ ಎಲಾನ್ ಮಸ್ಕ್ ಆಸ್ತಿ ಮೌಲ್ಯ 9000 ಕೋಟಿ ಡಾಲರ್ ದಾಟಿದೆ. ವಿಶ್ವದ ಅತ್ಯಂತ 500 ಶ್ರೀಮಂತರಲ್ಲಿ ಅತಿದೊಡ್ಡ ಗಳಿಕೆ ಕಂಡಿರುವ ವ್ಯಕ್ತಿ ಎಲಾನ್ ಮಸ್ಕ್.

ಟೆಸ್ಲಾ ಕಂಪೆನಿಯು S&P 500 ಅನ್ನು ಡಿಸೆಂಬರ್ 21ನೇ ತಾರೀಕು ಪ್ರವೇಶಿಸಲಿದೆ. ಈ ಗುಂಪಿನ ಇತಿಹಾಸದಲ್ಲೇ ಅತಿ ದೊಡ್ಡ ಪ್ರವೇಶ  ಪಡೆಯುತ್ತಿರುವ ಕಂಪೆನಿ ಟೆಸ್ಲಾ.

Exit mobile version