‘ಎವಿಡೆನ್ಸ್’ ಕೊಡದೇ ಚಿತ್ರೀಕರಣ ಪೂರ್ಣ..!

ಹೌದು, ಕೊರೊನಾ ಕಾಲದಲ್ಲಿಯೂ ಚಿತ್ರೀಕರಣ ಪೂರ್ತಿಗೊಳಿಸಿದ ಅಪರೂಪದ ದಾಖಲೆ ಎವಿಡೆನ್ಸ್’ ಚಿತ್ರದ ಪಾಲಾಗಿದೆ. ಆ ಕಾರಣಕ್ಕೆ ಮಾತ್ರವಲ್ಲ, ಚಿತ್ರಕತೆಯ ವಿಚಾರದಲ್ಲಿಯೂ ವಿಭಿನ್ನ ಎನಿಸಿಕೊಳ್ಳುವ ಹಾಗೆ ಎವಿಡೆನ್ಸ್’ ಸಿನಿಮಾ ಮೂಡಿ ಬಂದಿದೆ ಎಂದು ನಿರ್ದೇಶಕ ಪ್ರವೀಣ್ ಅವರು ಎವಿಡೆನ್ಸ್ ಸಮೇತ ನಿರೂಪಿಸಿದ್ದಾರೆ.

ಚಿತ್ರವೊಂದು ಕನ್ನಡ ಚಿತ್ರರಂಗದಲ್ಲಿ ರೂಪುಗೊಂಡಿದೆ. ತೀರಾ ವಿಶೇಷ ಎನ್ನಿಸಿಕೊಳ್ಳುವ ಆವಿಷ್ಕಾರ ಇಲ್ಲಿ ಯಶಸ್ವಿಯಾಗಿ ನೆರವೇರಿದೆ.

ಧೃತಿ ಪ್ರೊಡಕ್ಷನ್ಸ್‌ ಅಡಿಯಲ್ಲಿ ಪ್ರವೀಣ್ ತಮ್ಮ ಸ್ನೇಹಿತರ ಜೊತೆ ಸೇರಿ ನಿರ್ಮಿಸಿರುವ ಚಿತ್ರ ಇದು. ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ‌‌.

ರವಿ ಸುವರ್ಣ ಅವರು ಛಾಯಾಗ್ರಹಣ ನಿರ್ವಹಿಸಿದ್ದು, ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಚಿತ್ರ ಪೂರ್ತಿ ಎರಡೇ ಪಾತ್ರಗಳು ಇರುವುದು ಈ ಸಿನಿಮಾದ ಪ್ರಮುಖ ವಿಶೇಷ. ಮಾತ್ರವಲ್ಲ ಒಂದೇ ಲೊಕೇಶನ್ ನಲ್ಲಿ ಈ ಎರಡು ಪಾತ್ರಗಳ ಮೂಲಕ ಕಥೆ ತೆರೆದುಕೊಳ್ಳಲಿದೆ ಎನ್ನಲಾಗಿದೆ

. ರೋಬೋ ಗಣೇಶ್ ಮತ್ತು ಮಾನಸ ಜೋಷಿ ಆ ಎರಡು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸಸ್ಪೆನ್ಸ್ , ಥ್ರಿಲ್ಲರ್ ಜಾನರಿನ ಈ ಚಿತ್ರದಲ್ಲಿ ಇದುವರೆಗೆ ಎಲ್ಲೂ ಅನಾವರಣಗೊಳ್ಳದ ಕಥಾವಸ್ತು ಇರಲಿದೆ‌ ಎಂದು ನಿರ್ದೇಶಕ ಪ್ರವೀಣ್ ರಾಮಕೃಷ್ಣ ಭರವಸೆ ವ್ಯಕ್ತಪಡಿಸಿದ್ದಾರೆ.

ಚಿತ್ರೀಕರಣದ ವೇಳೆ ನಿಜಕ್ಕೂ ಚಾಲೆಂಜ್ ಎದುರಿಸಿದ ಛಾಯಾಗ್ರಾಹಕ ರವಿಸುವರ್ಣ ಅವರ ಪ್ರಕಾರ “ಒಂದೇ ಜಾಗ ಮತ್ತು ಎರಡು ಪಾತ್ರಗಳನ್ನು ಬಳಸಿಕೊಂಡು ಇಡೀ ಸಿನಿಮಾವನ್ನು ಕಟ್ಟಿ ನಿಲ್ಲಿಸುವುದು ನಿಜಕ್ಕೂ ಸವಾಲಿನ ಕೆಲಸ.

ನಿರ್ದೇಶಕರಾದ ಪ್ರವೀಣ್ ಅವರ ಕಲ್ಪನೆಯೇ ಅದ್ಭುತ. ಪ್ರೇಕ್ಷಕರು ಅರೆಕ್ಷಣವೂ ಅತ್ತಿತ್ತ ಗಮನ ಹರಿಸದಂತೆ ಕಾಪಾಡುವ ಶಕ್ತಿ ಈ ಚಿತ್ರಕ್ಕಿದೆ”ಯಂತೆ. ಕನಕಪುರ ಮುಖ್ಯರಸ್ತೆಯಲ್ಲಿರುವ `ಭೂಮಿಕಾ ಸ್ಟುಡಿಯೋ’ನಲ್ಲಿ ಎವಿಡೆನ್ಸ್ ಸಿನಿಮಾದ ಎಲ್ಲ ದೃಶ್ಯಗಳು ಚಿತ್ರೀಕರಣಗೊಂಡಿದೆ. ಸಿನಿಮಾದ ಬಹುತೇಕ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ಮುಂದಿನ ವಿವರಗಳನ್ನು ಸದ್ಯದಲ್ಲೇ ಹೊರಗೆ ತರುವುದಾಗಿ ಚಿತ್ರತಂಡ ತಿಳಿಸಿದೆ.

ಶಶಿಕರ ಪಾತೂರು

Exit mobile version