ಏಕತಾ ಪ್ರತಿಮೆ ಇಂದಿನಿಂದ ಪ್ರವಾಸಿಗರಿಗೆ ಮುಕ್ತ

ಗುಜರಾತ್‌, ಅ.17: ಕೊರೊನಾ ಅಟ್ಟಹಾಸದಿಂದಾಗಿ ಕಳೆದ 7 ತಿಂಗಳಿಂದ ಪ್ರವಾಸಿಗರಿಗೆ ನಿರ್ಬಂಧಗೊಳಿಸಲಾಗಿದ್ದ ವಿಶ್ವದ ಅತ್ಯಂತ ಎತ್ತರದ ಏಕತಾ ಪ್ರತಿಮೆಯು ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್-19 ಮಾರ್ಗ ಸೂಚಿಗಳಿಗೆ ಒಳಪಟ್ಟು ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ತಿಳಿಸಲಾಗಿದೆ.

ಗುಜರಾತ್‍ನ ನರ್ಮದಾ ನದಿತಟದಲ್ಲಿರುವ ಉಕ್ಕಿನ ಮನುಷ್ಯರೆಂದೇ ಪ್ರಸಿದ್ಧರಾಗಿರುವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ 182 ಮೀಟರ್‍ಗಳಷ್ಟು ಎತ್ತರವಾದ ಭವ್ಯ ಪುತ್ಥಳಿ ವೀಕ್ಷಣೆಗೆ ಇಂದಿನಿಂದ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಕಟ್ಟು ನಿಟ್ಟಿನ ಕೊವಿಡ್‌ ನಿಯಮಾವಳಿಗನ್ವಯ ಪ್ರತಿದಿನ 2500 ಮಂದಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ಪುತ್ಥಳಿಗೆ ಒಳಭಾಗದಲ್ಲಿರುವ ವಿಹಂಗಮ ನೋಟದ ಗ್ಯಾಲರಿಗೆ ಕೇವಲ 500 ಪ್ರವಾಸಿಗರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್‍ನ ನರ್ಮದಾ ಜಿಲ್ಲೆಯ ಕೆವಾಡಿಯ ಎಂಬಲ್ಲಿ ನರ್ಮದಾ ನದಿ ದಂಡೆ ಮೇಲೆ ನಿರ್ಮಿಸಲಾದ ವಿಶ್ವದ ಅತ್ಯಂತ ಎತ್ತರದ ಈ ಪ್ರತಿಮೆಯನ್ನು 2018ರ ಅಕ್ಟೋಬರ್ 31ರಂದು ಪ್ರಧಾನಿ ಲೋಕಾರ್ಪಣೆ ಮಾಡಿದ್ದರು. ಈ ಪ್ರತಿಮೆಯನ್ನು ವೀಕ್ಷಿಸಲು ಆನ್‍ಲೈನ್ ಮೂಲಕ ಮಾತ್ರ ಟಿಕೆಟ್ ಬುಕಿಂಗ್ ಸೌಲಭ್ಯಕ್ಕೆ ಮಾತ್ರ ಅವಕಾಶವಿದ್ದು, ಸ್ಯಾನಿಟೈಸರ್, ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವ ನಿಯಮ ವಿಧಿಸಲಾಗಿದೆ. 

Exit mobile version