ಒಂದು ಫೇಸ್‌ಬುಕ್‌ ಪೋಸ್ಟ್‌ – ಮನೆಗಳಿಗೆ ಬೆಂಕಿ

ಕೋಲ್ಕತಾ, ನ. 3: ಬಾಂಗ್ಲಾದೇಶದ ಕೊಮಿಲ್ಲಾ ಜಿಲ್ಲೆಯಲ್ಲಿಅನೇಕ  ಹಿಂದೂಗಳ ಮನೆಗಳ ಮೇಲೆ ಕಿಡಿಗೇಡಿಗಳು ನುಗ್ಗಿ ದಾಂಧಲೆ ನಡೆಸಿ, ಮನೆಗಳಿಗೆ ಬೆಂಕಿ ಹಚ್ಚಿದ ಕರ ಘಟನೆ ನಡೆದಿದೆ. ಫೇಸ್‌ ಬುಕ್‌ನಲ್ಲಿ ಇಸ್ಲಾಂ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಲಾಗಿದೆ ಎಂಬ ಸಣ್ಣ ಕಾರಣಕ್ಕಾಗಿ  ದುಷ್ಕೃತ್ಯವೆಸೆದಿದ್ದಾರೆ. ಫ್ರಾನ್ಸ್‌ನಲ್ಲಿ ನೆಲೆಸಿರುವ ಬಾಂಗ್ಲಾ  ದೇಶದ ವ್ಯಕ್ತಿಯೊಬ್ಬರು ಅಲ್ಲಿನ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ಅಮಾನವೀಯ ಸಿದ್ಧಾಂತಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾದ ಬಳಿಕ ಶನಿವಾರ ಜಿಲ್ಲೆಯಲ್ಲಿಉದ್ವಿಘ್ನ ವಾತಾವರಣ ಸೃಷ್ಟಿಯಾಯಿತು. ಇದರಿಂದಾಗಿ ಕೆಲ ಕಿಡಿಗೇಡಿಗಳು ಜಿಲ್ಲೆಯಲ್ಲಿರುವ ಹಿಂದೂಗಳ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಧಾರ್ಮಿಕ ನಂಬಿಕೆಗಳ ಮೇಲೆ ಧಕ್ಕೆ ತಂದ ಆರೋಪ ಹೊರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಮ್ಮದ್ ಅಬ್ಧುಲ್ ಪಝಲ್  ಮಿರ್  ಅವರು ಹೇಳಿದ್ದಾರೆ.

ಸ್ಥಳೀಯರೇ ಈ ಕೃತ್ಯವೆಸಗಿದ್ದಾರೆ. ಒಟ್ಟು 15 ದೇಗುಲಗಳನ್ನು ಧ್ವಂಸಗೊಳಿಸಲಾಗಿದೆ. ಬ್ರಾಹ್ಮಣ್‌ಬಹಿಯಾ ಜಿಲ್ಲೆಯ ನರಸಿಂಗಪುರದಲ್ಲಿರುವ ದೇಗುಲಗಳು ಮತ್ತು ಹಿಂದೂಗಳ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಲಾಗಿದೆ ಮತ್ತು ಅವುಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದ ನರಸಿಂಗಪುರ ಮತ್ತು ಮಾಧವಪುರಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಗ್ಲಾದೇಶ ಗಡಿ ಭದ್ರತಾ ಪಡೆಯ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಸೂತ್ರಧಾರರನ್ನೂ ಬಂಧಿಸಲಾಗಿದೆ ಮತ್ತು ಸ್ಥಳೀಯ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಆತನನ್ನು ಜೈಲಿಗೆ ಕಳುಹಿಸಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಮ ರುಝ್ಖಾನ್‌ ಅವರು ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ವಿಡಿಯೋಗಳನ್ನು ನೋಡಿ ದುಷ್ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಕುರ್ಬಾನ್ಪುರ್‌ ಮತ್ತು ಆಯಂಡಿ ಕೋಟ್‌ ಗ್ರಾಮಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಲೋಕಸಭೆಯ ಕಾಂಗ್ರೆಸ್‌ ನಾಯಕ, ಬೆಹ್ರಾಮ್‌ ಪುರ ಕ್ಷೇತ್ರದ ಸಂಸದ ಅಧಿರ್‌ ರಂಜನ್‌ ಚೌಧರಿ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ಕೇಂದ್ರ ಸರಕಾರ ಬಾಂಗ್ಲಾ ದೇಶದಲ್ಲಿ ನಡೆದ ಘಟನೆ ಬಗ್ಗೆ ಅಲ್ಲಿನ ಸರಕಾರದ ಜತೆಗೆ ಮಾತುಕತೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version