ಕಂಗನಾ ಹೇಳಿಕೆ ಕೇಳಿ ರಾಜಕೀಯದ ದಾಳಗಳಾಗಬೇಡಿ: ಪ್ರಕಾಶ್ ರಾಜ್

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಡ್ರಗ್ಸ್‌ ವಿಚಾರವೊಂದೇ ಸುದ್ದಿ. ಒಂದು ಕಡೆ ಸಿನಿಮಾಗಳ ಚಟುವಟಿಕೆ ಕಡಿಮೆಯಾಗಿದ್ದರೆ ಮತ್ತೊಂದೆಡೆ ಡ್ರಗ್ಸ್‌ ದಂಧೆಯನ್ನು ಸಿನಿಮಾರಂಗಕ್ಕೆ ತಳುಕು ಹಾಕಲಾಗಿದೆ. ಬಾಲಿವುಡ್ ವಿಚಾರಕ್ಕೆ ಬಂದರೆ ಅಲ್ಲಿಯೂ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಕಂಗನಾ ರನಾವತ್ ಹೆಸರು ಆರೋಪ ವಿವಾದಗಳಿಂದ ಸುದ್ದಿಯಲ್ಲಿದೆ.

ಎಲ್ಲ ಕಡೆ ಸಿನಿಮಾದ ಜತೆಗೆ ರಾಜಕೀಯ ಬೆರೆತು ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಸರಿಯಾದ ನೋಟವನ್ನು ಒದಗಿಸಬಲ್ಲ ವ್ಯಕ್ತಿಯಾಗಿ ಪ್ರಕಾಶ್ ರಾಜ್ ಕಾಣಿಸುತ್ತಾರೆ. ಯಾಕೆಂದರೆ ಅವರೊಬ್ಬ ಪಂಚಭಾಷಾ ತಾರೆ ಮಾತ್ರವಲ್ಲ, ರಾಜಕೀಯದ ದಾಳಗಳನ್ನು ಬಹಳ ಹತ್ತಿರದಿಂದ ಬಲ್ಲವರು ಕೂಡ ಹೌದು. ಹಾಗಾಗಿ ಪ್ರಕಾಶ್ ರಾಜ್ ಜೊತೆಯಲ್ಲಿ ಮಾತನಾಡಿದಾಗ ಈ ಎಲ್ಲ ವಿಚಾರಗಳ ಬಗ್ಗೆ ಅವರು ನೀಡಿದ ಉತ್ತರ ನೇರವಾದ ಉತ್ತರಗಳು ಇಲ್ಲಿವೆ.

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್‌ ದಂಧೆ ನಡೆಯುತ್ತಿರುವ ಆರೋಪದ ಬಗ್ಗೆ ನಿಮ್ಮ ಅನಿಸಿಕೆ ಏನು?

ಡ್ರಗ್ಸ್‌ ಎನ್ನುವ ವಿಚಾರ ಇತ್ತೀಚಿನ ಕೆಲವು ವಾರಗಳಲ್ಲಿ ಹೆಚ್ಚು ಸದ್ದು ಮಾಡಿರಬಹುದು. ಆದರೆ ಅದರ ಮೂಲ ಹುಡುಕುತ್ತ ಹೋದರೆ ನನ್ನ ಕಾಲೇಜು ದಿನಗಳಲ್ಲೇ ಬೆಂಗಳೂರಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿತ್ತೆಂದು ನನಗೆ ತಿಳಿದಿತ್ತು.

ನನ್ನಂಥ ಸಾಮಾನ್ಯನಿಗೆ ತಿಳಿದ ವಿಚಾರ ಸರ್ಕಾರಕ್ಕೆ ತಿಳಿದಿರಲಿಲ್ಲವೇ? ಇಂದು ಆ ದಂಧೆ ಎಲ್ಲೆಡೆ ವ್ಯಾಪಿಸಿರಬಹುದು. ಅದರಲ್ಲಿ ಚಿತ್ರರಂಗ ಕೂಡ ಭಾಗಿ ಇರಬಹುದು. ಅದರ ಹೊರತು, ಚಿತ್ರರಂಗವೊಂದೇ ಡ್ರಗ್ಸ್‌ಗೆ ಕಾರಣ ಎಂದು ಹೇಳಲಾಗದು. ಸಿನಿಮಾ ಮಂದಿ ಏನೇ ಮಾಡಿದರೂ ಅವರ ಜನಪ್ರಿಯತೆಯ ಕಾರಣದಿಂದ ಅದು ದೊಡ್ಡ ಸುದ್ದಿಯಾಗುತ್ತದೆ.

ಕಂಗನಾ ಬಗ್ಗೆ ನೀವು ಮಾಡಿರುವ ಟ್ವೀಟ್‌ಗಳು ಆಕೆಯ ಹೋರಾಟದ ಸತ್ಯಾಸತ್ಯತೆಯನ್ನು ಪ್ರಶ್ನಿಸುತ್ತಿವೆ ಅಲ್ಲವೇ?

ನಾನು ಮೂಲತಃ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ವಿಚಾರಗಳನ್ನು ಪ್ರತಿಭಟಿಸುವವನು. ಆದರೆ ಪ್ರತಿಭಟನೆಯೂ ಕೂಡ ಮತ್ತೊಬ್ಬರ ಸ್ವಾತಂತ್ರ್ಯದ ದಾರಿ ತಪ್ಪಿಸುವ ರೀತಿ ತಲುಪಿದಾಗ ಅವುಗಳ ಬಗ್ಗೆ ಧ್ವನಿ ಎತ್ತಲೇ ಬೇಕಾಗಿದೆ. ಸತ್ಯ ಗೊತ್ತಿದ್ದವರು ಸುಮ್ಮನಿದ್ದರೆ ಸುಳ್ಳು ಹೇಳುವವರ ಕೆಲಸ ಸುಲಭವಾಗುತ್ತದೆ. ಡ್ರಗ್ಸ್ ಆಗಲೀ, ಆತ್ಮಹತ್ಯೆ ಆಗಲೀ, ನೆಪೊಟಿಸಮ್ ಆಗಲೀ ಘಟನೆಗಳು.

ನಾವು ಘಟನೆಗಳಲ್ಲಿನ ವಿಚಾರಗಳನ್ನು ಅರ್ಥ ಮಾಡಿಕೊಂಡು ಮಾತನಾಡಬೇಕೇ ಹೊರತು ರಾಜಕೀಯ ಪ್ರೇರಿತ ವ್ಯಕ್ತಿಗಳ ದಾಳಕ್ಕೆ ಸಿಕ್ಕು ಪ್ರತಿಕ್ರಿಯೆ ನೀಡಬಾರದು. ಯಾಕೆಂದರೆ ರಿಯಾ ಚಕ್ರವರ್ತಿ ಆಗಲೀ ಅಥವಾ ಕಂಗನಾ ಆಗಲೀ ರಾಜಕೀಯ ಬೆಂಬಲಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮ ಜನತೆ ಭಾವನಾತ್ಮಕವಾಗಿ ಕಂಗನಾರನ್ನು ಕಣ್ಮುಚ್ಚಿ ಬೆಂಬಲಿಸುತ್ತಿದ್ದಾರೆ.

ಆದರೆ ಕಂಗನಾ ಹೇಳಿಕೆಗಳಲ್ಲಿ ರಾಜಕೀಯ ಇರುವುದನ್ನು ಸ್ವಲ್ಪ ಯೋಚಿಸಿದರೂ ಅರ್ಥ ಮಾಡಿಕೊಳ್ಳಬಹುದಾಗಿದೆ. ಅವರು ಆಕೆಯ ಕಚೇರಿಯನ್ನು ಕೆಡವಿ ಹಾಕುತ್ತಾರೆ. ಆಕೆ ತನ್ನ ಕಚೇರಿಯನ್ನು ರಾಮಮಂದಿರಕ್ಕೆ ಹೋಲಿಸುತ್ತಾರೆ! ತಮ್ಮ ಮುಂದಿನ ಸಿನಿಮಾವನ್ನು ರಾಮಮಂದಿರಕ್ಕೆ ಸಂಬಂಧಿಸಿದಂತೆ ಮಾಡುವುದಾಗಿ ಹೇಳುತ್ತಾರೆ. .

ನಿಮ್ಮ ಸಹಾಯಗಳು ಕರ್ನಾಟಕಕ್ಕೆ ತಲುಪುವುದು ಕಡಿಮೆ ಎನ್ನುವವರಿಗೆ ಏನಂತೀರಿ?

ಸಹಾಯ ಎನ್ನುವುದು ಮನುಷ್ಯ ಮನುಷ್ಯರ ನಡುವಿನ ಸ್ನೇಹ, ನಂಬಿಕೆ, ಸೌಹಾರ್ದತೆಯ ವಿಚಾರ. ಸಹಾಯ ಮಾಡಬಲ್ಲೆ ಎಂದಾದ ತಕ್ಷಣ ಎದುರಿಗೆ ಸಿಕ್ಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬಹುದೇ ಹೊರತು ಅದರಲ್ಲಿ ನಮ್ಮವರು ಯಾರು ಎಂದು ಹುಡುಕಿ ಕೂರಲು ಸಾಧ್ಯವಿಲ್ಲ. ಮಾತ್ರವಲ್ಲ, ನಾನು ಸಹಾಯವನ್ನು ನನ್ನ ಆತ್ಮತೃಪ್ತಿ ಎನ್ನುವ ಸ್ವಾರ್ಥಕ್ಕಾಗಿ ಮಾಡುತ್ತೇನೆ ಎಂದಾದಾಗ ಒಬ್ಬ ಅಪರಿಚಿತನಿಗೆ ಸಹಾಯ ಮಾಡಿ ಆತನಲ್ಲಿ ಮನುಷ್ಯ ಸಂಬಂಧದ ಬಗ್ಗೆ ನಂಬಿಕೆ ಮೂಡಿಸುವಲ್ಲಿ ಹೆಚ್ಚು ಖುಷಿ ಕಾಣುತ್ತೇನೆ.

ಯಾಕೆಂದರೆ ಬೇರೊಂದು ಊರಲ್ಲಿ ಆತನಿಗೆ ಸಂಬಂಧವೇ ಇರದ ವ್ಯಕ್ತಿಯೊಬ್ಬ ಸಹಾಯಕ್ಕೆ ನಿಂತಾಗ ಪಡೆದುಕೊಂಡವನಲ್ಲಿ ಬೆಳೆಯುವ ಭಾವೈಕ್ಯತೆ ದೊಡ್ಡದು. ಆ ಊರಿನವನೊಬ್ಬ ಅವರ ಕಷ್ಟಕ್ಕೆ ನಿಂತಾಗ ಆ ಊರು ನಮ್ಮದು ಅನಿಸುತ್ತದೆ.

ಈ ಭಾವನೆ ನಾನು ಅರ್ಥೈಸಬಲ್ಲೆ. ಯಾಕೆಂದರೆ ಕರ್ನಾಟಕ ಬಿಟ್ಟು ಬೇರೆ ಎಲ್ಲೇ ಹೋದರು ನಾನು ಪರಕೀಯನೇ. ಆ ಪರಕೀಯತೆ ಬಗ್ಗೆ ನನಗೆ ಗೊತ್ತು. ಹಾಗಂತ ನಾನು ಯಾವತ್ತೂ ಕನ್ನಡಿಗರಿಗೆ ಆದ್ಯತೆ ನೀಡಿಲ್ಲ ಎಂದರೆ ತಪ್ಪಾಗುತ್ತದೆ.

ಮುಖ್ಯವಾಗಿ ನಾನು ಲಾಕ್ಡೌನ್ ಸಂದರ್ಭದಲ್ಲಿ ಇದ್ದಿದ್ದೇ ಹೈದರಾಬಾದ್‌ನಲ್ಲಿ. ಬೆಂಗಳೂರಿನ ಹಸಿರು ದಳ',ತಮಟೆ’ ಮತ್ತು ತಮಿಳುನಾಡಿನ `ಸ್ಕೋಪ್ ಎಂಟರ್ಟೈನ್ಮೆಂಟ್’ ಜತೆಗೆ ಕೈಜೋಡಿಸಿ ಇರುವಲ್ಲಿಂದಲೇ ನನ್ನಿಂದಾಗುವ ಕೆಲಸಗಳನ್ನು ಮಾಡಿದ್ದೇನೆ.

ಹಿಂದಿ ಹೇರಿಕೆಯ ವಿರುದ್ಧದ ಧ್ವನಿ ನಿಮ್ಮನ್ನು ಹಿಂದಿ ಸಿನಿಮಾಗಳಿಂದ ದೂರಾಗಿಸದೇ?

ನಾನು ಮೊದಲಿನಿಂದಲೂ ಕು.ವೆಂ.ಪು ಅವರ ವಿಶ್ವಮಾನವ ತತ್ವವನ್ನು ನಂಬುವವನು. ನಾನು ಹಲವಾರು ಕಡೆ ಹೇಳಿಕೊಂಡಂತೆ ನನಗೆ ಸಾಕಷ್ಟು ಭಾಷೆಗಳು ಗೊತ್ತು. ಆದರೆ ನೀವು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ನಾನು ಅರ್ಥ ಮಾಡಿಕೊಳ್ಳುವ ಭಾಷೆ ಕನ್ನಡ.

ಅದೇ ನನ್ನ ಬೇರು, ಅದೇ ನನ್ನ ಶಕ್ತಿ. ಹಲವು ಭಾಷೆಗಳಲ್ಲಿ ಕೆಲಸ ಮಾಡುವುದು ನನಗೆ ಸಿಗುವಂಥ ಅವಕಾಶ. ಇಲ್ಲಿ ಹಿಂದಿ ಹೇರಿಕೆ ಬೇಡ ಎನ್ನುವ ಕಾರಣಕ್ಕಾಗಿ ನನ್ನ ಅವಕಾಶವನ್ನು ತಡೆಯುವುದಾದರೆ ಅದು ಹೇರಿಕೆಯ ಮತ್ತೊಂದು ರೂಪ. ನನಗೆ ಇದು ಯಾವುದೂ ಹೊಸದಲ್ಲ. ರಾಜಕೀಯ ಕಾರಣಕ್ಕಾಗಿ ನನ್ನನ್ನು ಚಿತ್ರರಂಗದಿಂದ ದೂರ ಮಾಡುವ ಪ್ರಯತ್ನಗಳು ಪಿಸುಮಾತಲ್ಲಿ ನಡೆದೇ ಇವೆ. ಅದರತ್ತ ನಾನು ಗಮನಿಸುವುದಿಲ್ಲ. ನನಗೆ ಆ ಬಗ್ಗೆ ಯಾವುದೇ ಆತಂಕಗಳಿಲ್ಲ.

Story -ಶಶಿಕರ ಪಾತೂರು

Exit mobile version