ಕಟ್ಟಡ ಕಾರ್ಮಿಕರಿಗೆ ಗುಡ್‌ ನ್ಯೂಸ್‌

ಮೈಸೂರು: ‘ಕಟ್ಟಡ ಕಾರ್ಮಿಕರು ತಮ್ಮ ಕೆಲಸದ ನಿಮಿತ್ತ ರಾಜ್ಯದ ವಿವಿಧೆಡೆ ಸಂಚರಿಸಲು ಅನುಕೂಲವಾಗುವಂತೆ ನಿಗಮದಿಂದ ಉಚಿತವಾಗಿ ಬಸ್‌ ಪಾಸ್ ನೀಡಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಈ ಯೋಜನೆ ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿನ 60,600 ಕಟ್ಟಡ ಕಾರ್ಮಿಕರಿಗೆ ಅನುಷ್ಠಾನಗೊಳಿಸಲಾಗುತ್ತದೆ. ನಂತರದ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಕೋವಿಡ್‌ನಿಂದ ತತ್ತರಿಸಿರುವ ಕೂಲಿ ಕಾರ್ಮಿಕರಿಗೆ ನೆರವಾಗಲಿಕ್ಕಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ಉಚಿತವಾಗಿ ಪ್ರಯಾಣಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಲಾಕ್‌ಡೌನ್‌ನಿಂದಾಗಿ  ಕೆಎಸ್‌ಆರ್‌ಟಿಸಿಗೆ ₹ 1,600 ಕೋಟಿ ನಷ್ಟವಾಗಿದೆ. ಪ್ರಯಾಣಿಕರ ಅಗತ್ಯತೆಗೆ ಅನುಸಾರವಾಗಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರು ಗ್ರಾಮಾಂತರ ಭಾಗದಿಂದ 70 ಹಾಗೂ ನಗರ ವಿಭಾಗದಿಂದ 20 ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಒದಗಿಸಲಾಗುವುದು. ಲಾಭದ ಹಿತಾಸಕ್ತಿಗಿಂತ ಸಾರ್ವಜನಿಕರ ಸೇವೆಗೆ ಒತ್ತು ನೀಡುತ್ತೇವೆ’ ಎಂದು ಚಂದ್ರಪ್ಪ ತಿಳಿಸಿದರು.

Exit mobile version