ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ: ರೆಡ್‌ ಅಲರ್ಟ್

ಧಾರಾಕಾರ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ನದಿ

ಕಲಬುರಗಿ, ಅಕ್ಟೋಬರ್. 15: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಕಲಬುರಗಿ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಅಕ್ಟೋಬರ್ 16ರ ತನಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಲೇ ಹವಾಮಾನ ಇಲಾಖೆಯು ಕಲಬುರಗಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿದ್ದು, ಜನರಿಗೆ ಜಿಲ್ಲಾಡಳಿತ ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಿದೆ. ಪ್ರಮುಖವಾಗಿ ನದಿ ತೀರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮಹಾರಾಷ್ಟ್ರಕ್ಕೆ ತಾಗಿಗೊಂಡಿರುವ ಕಲಬುರಗಿ ಜಿಲ್ಲೆಯಾದ್ದರಿಂದ ಸಹ ಹೆಚ್ಚಿನ ಮಳೆ ಆಗುವ ಸಂಭವವಿದೆ. ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಲಿದೆ.

ಜಲಾಶಯ ತೀರದಲ್ಲಿರುವ ಗ್ರಾಮಗಳು ಹಾಗೂ ಗ್ರಾಮಸ್ಥರು ಎಚ್ಚರ ವಹಿಸಬೇಕು, ಹಾಗೂ ನದಿ ದಂಡೆಯಲ್ಲಿ ಬಟ್ಟೆ ಒಗೆಯುವುದು, ವಾಹನ ತೊಳೆಯುವುದು, ಮಕ್ಕಳು ಈಜಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ಮಳೆ, ಪ್ರವಾಹದ ಸಂಕಷ್ಟದ ಸಮಯದಲ್ಲಿ ಯಾವುದೇ ತುರ್ತು ಸಹಾಯಕ್ಕಾಗಿ ಜನರು ಕರೆ ಮಾಡಲು ಕಲಬುರಗಿ ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪನೆ ಮಾಡಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ 1077, ದೂರವಾಣಿ ಸಂಖ್ಯೆಗಳು 08472-278677, 9448557713 ಹಾಗೂ 8951222125 ಕರೆ ಮಾಡಬಹುದಾಗಿದೆ.

Exit mobile version