ಕಾಂಗ್ರೆಸ್‌ ತೊರೆದ ಖುಷ್ಬೂ, ಬಿಜೆಪಿಗೆ ಸೇರ್ಪಡೆ

ನವದೆಹಲಿ: ನಟಿ, ರಾಜಕಾರಣಿ ಖುಷ್ಬೂ ಸುಂದರ್‌ ಅವರನ್ನು ಎಐಸಿಸಿ ವಕ್ತಾರ ಸ್ಥಾನದಿಂದ ಕೈಬಿಡಲಾಗಿದೆ. ಸೋಮವಾರ ಖುಷ್ಬೂ ಬಿಜೆಪಿಗೆ ಸೇರುವ ಸಾಧ್ಯತೆ ಇರುವುದಾಗಿ ವರದಿಯಾದ ಬೆನ್ನಲ್ಲೇ ಕಾಂಗ್ರೆಸ್‌ನ ಎಲ್ಲ ಸ್ಥಾನಗಳಿಗೆ ಅವರು ರಾಜೀನಾಮೆ ನೀಡಿದ್ದಾರೆ. ಭಾನುವಾರ ಸಂಜೆ ಖುಷ್ಬೂ ತಮಿಳುನಾಡಿನಿಂದ ದೆಹಲಿ ತಲುಪಿದ್ದಾರೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.

‘ಪಕ್ಷದಲ್ಲಿ ವಾಸ್ತವದ ಸಂಪರ್ಕ ಇಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ’ ಎಂದು  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಖುಷ್ಬೂ, ಆರು ವರ್ಷಗಳ ಕಾಂಗ್ರೆಸ್ ಜೊತೆಗಿನ ನಂಟು ಮುರಿದುಕೊಂಡಿದ್ದಾರೆ.

2010ರಲ್ಲಿ ಖುಷ್ಬೂ ಡಿಎಂಕೆ ಸೇರ್ಪಡೆಯಾಗಿದ್ದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ಆದರೆ, 2014ರಲ್ಲಿ ಡಿಎಂಕೆ ತೊರೆದ ಅವರು ಸೋನಿಯಾ ಗಾಂಧಿ ಜೊತೆಗಿನ ಭೇಟಿ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2019ರ ಲೋಕಸಭಾ ಚುನಾವಣೆಯ ಡಿಎಂಕೆ-ಕಾಂಗ್ರೆಸ್‌ ಮೈತ್ರಿಯಲ್ಲಿ ಖುಷ್ಬೂ ಅವರಿಗೆ ಟಿಕೆಟ್‌ ಸಿಗಲಿಲ್ಲ, ಅದಲ್ಲದೇ ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಖಷ್ಬೂ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರೊಂದಿಗೆ ತಮಿಳುನಾಡಿನ ಐಆರ್‌ಎಸ್‌ ಅಧಿಕಾರಿ ಹಾಗೂ ಯುಟ್ಯೂಬರ್‌ ಸಹ ಬಿಜೆಪಿಗೆ ಸೇರಲಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್‌.ಮುರುಗನ್‌ ಶನಿವಾರದಿಂದಲೂ ನವದೆಹಲಿಯಲ್ಲೇ ಇದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇದೆ. ಖುಷ್ಬೂ ಅವರ ಇತಿಹಾಸವನ್ನು ಗಮನಿಸುವುದಾದರೆ, ಮುಂಬೈನ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಖುಷ್ಬೂ ಚಿಕ್ಕಂದಿನಿಂದಲೂ ನಟನೆಯಲ್ಲಿ ತೊಡಗಿಸಿಕೊಂಡರು. 90ರ ದಶಕದಲ್ಲಿ ತಮಿಳುನಾಡಿನ ಅತ್ಯಂತ ಜನಪ್ರಿಯ ಸ್ಟಾರ್‌ ನಟರಲ್ಲಿ ಖುಷ್ಬೂ ಸಹ ಒಬ್ಬರಾಗಿದ್ದರು. ಆ ಸಮಯದಲ್ಲಿ ಅಭಿಮಾನಿಗಳು ಅವರಿಗಾಗಿಯೇ ದೇವಾಲಯವನ್ನೂ ಕಟ್ಟಿದ್ದರು. ಅನಂತರದಲ್ಲಿ ಅವರು ಟಿವಿ ಧಾರಾವಾಹಿಗಳಲ್ಲಿ ನಟಿಸಿದರು ಹಾಗೂ ಟಿವಿ ನಿರೂಪಣೆಗಳನ್ನು ಮಾಡಿದ್ದಾರೆ.

Exit mobile version