ಕಾಯ್ದೆ ಜಾರಿಯಾಗದಂತೆ ಸದನದ ಒಳಗೆ ಮತ್ತು ಹೊರಗೆ ಗಟ್ಟಿ ಧ್ವನಿಯಲ್ಲಿ ವಿರೋಧಿಸಲು ಕಾಂಗ್ರೆಸ್ ಬದ್ಧ: ಸಿದ್ದು

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ಹೊಸ ತಿದ್ದುಪಡಿ ತಂದು ನಾಡಿನ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಜಮೀನ್ದಾರಿ ಪದ್ಧತಿಗೆ ಅಂತ್ಯ ಹಾಡಬೇಕೆಂಬ ಉದ್ದೇಶದಿಂದ 1974ರಲ್ಲಿ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಉಳುವವನನ್ನೇ ಭೂಮಿಯ ಒಡೆಯ ಎಂದು ಘೋಷಣೆ ಮಾಡಲಾಯಿತು. ಈಗಿನ ಸರ್ಕಾರ ಈ ಕಾಯ್ದೆಗೆ ಹೊಸ ತಿದ್ದುಪಡಿ ತಂದು ನಾಡಿನ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು, ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಹೊರಟಿದ್ದು, ಇದರಿಂದ ಈಗಾಗಲೇ ನ್ಯಾಯಾಲಯದಲ್ಲಿರುವ ಸುಮಾರು 13,814 ಪ್ರಕರಣಗಳು ಖುಲಾಸೆಗೊಂಡು, ನಿಯಮಬಾಹಿರವಾಗಿ ಭೂಮಿ ಖರೀದಿ ಮಾಡಿದ್ದವರಿಗೆ ಭೂಮಿಯ ಒಡೆತನದ ಹಕ್ಕು ಸಿಗಲಿದೆ ಎಂದು ಹೇಳಿದ್ದಾರೆ.

ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತನ್ನಿ, ಅದರಿಂದ ನಮಗೆ ಅನುಕೂಲ ಆಗುತ್ತೆ ಎಂದು ಯಾರಾದ್ರೂ ಒಬ್ಬನೇ ಒಬ್ಬ ರೈತ ಸರ್ಕಾರದ ಬಳಿ ಮನವಿ ಮಾಡಿದ್ದನಾ? ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರನ್ನು ಉದ್ಧಾರ ಮಾಡ್ತೀವಿ ಅಂತ ಹೇಳಿ ರೈತರಿಂದ ಭೂಮಿಯನ್ನು ಕಿತ್ತು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯಲು ಹೊರಟಿವೆ ಎಂದು ತಿಳಿಸಿದ್ದಾರೆ.

ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಯೋಚನೆ ಸರ್ಕಾರಕ್ಕೆ ತಾನಾಗಿಯೇ ಬಂದದ್ದಲ್ಲ. ಇದರ ಹಿಂದೆ ಸಾವಿರಾರು ಕೋಟಿ ಹಣದ ಕಳ್ಳ ವ್ಯವಹಾರ ನಡೆದಿದೆ. ಇಲ್ಲದಿದ್ದರೆ ಜನ ಕೊರೊನಾದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ಚುನಾಯಿತ ಸರ್ಕಾರವೊಂದು ಇಷ್ಟು ಅಮಾನವೀಯವಾಗಿ ವರ್ತಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಇದರ ಜೊತೆಗೆ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ಮಾದರಿ ತಿದ್ದುಪಡಿ ರೂಪಿಸಿ, ಇದನ್ನು ಎಲ್ಲ ರಾಜ್ಯಗಳು ಒಪ್ಪಿಕೊಳ್ಳಬೇಕು ಎಂದು ಸರ್ವಾಧಿಕಾರಿ ರೀತಿ ವರ್ತಿಸುತ್ತಿದೆ. ರಾಜ್ಯ ಪಟ್ಟಿಯಲ್ಲಿರುವ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಎಂದು ಹೇಳಲು ಕೇಂದ್ರ ಸರ್ಕಾರಕ್ಕೆ ಯಾವ ಅಧಿಕಾರವಿದೆ? ಎಂದು ಕೇಳಿದ್ಧಾರೆ.

ಕೇಂದ್ರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ 8 ಮಂದಿ ಸಂಸದರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ. ಈಗ ದೇಶದಲ್ಲಿ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಂಘರ್ಷ ಆರಂಭಗೊಂಡಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ರೈತರು, ದಲಿತರು, ಕಾರ್ಮಿಕರು ಸೇರಿದಂತೆ ಇಡೀ ದೇಶ ಒಂದಾಗಬೇಕು ಎಂದಿದ್ದಾರೆ.

ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ, ವಿದ್ಯುಚ್ಛಕ್ತಿ ಕಾಯಿದೆಗೆ ತಿದ್ದುಪಡಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಜನವಿರೋಧಿ ಕಾಯಿದೆಗಳ ವಿರುದ್ಧ ಒಮ್ಮತದ ಕೂಗು ಹೊರಹೊಮ್ಮಬೇಕು. ಕಾಯಿದೆ ಜಾರಿಯಾಗದಂತೆ ಸದನದ ಒಳಗೆ ಮತ್ತು ಹೊರಗೆ ಗಟ್ಟಿ ಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್ ಪಕ್ಷ ಬದ್ಧವಿದೆ ಎಂದು ಹೇಳಿದ್ದಾರೆ.

Exit mobile version