ಕುಂಭದ್ರೋಣ ಮಳೆಗೆ ಜನರ ಬದುಕು ತತ್ತರ

ಹೈದರಾಬಾದ್‌, ಅ. 16: ಎರಡು ಮೂರು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತೆಲಂಗಾಣ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಜನರ ಜೀವನ ಅಸ್ತವ್ಯಸ್ತವಾಗಿದೆ. ಈ ಸಂಬಂಧಿ ಅನಾಹುತದಿಂದಾಗಿ 77 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣದಲ್ಲಿ 50 ಹಾಗೂ ಮಹಾರಾಷ್ಟ್ರದಲ್ಲಿ 27 ಜನ ಮೃತಪಟ್ಟಿದ್ದಾರೆ. ಬುಧವಾರ ಒಂದೇ ದಿನ ಸುರಿದ ಕುಂಭದ್ರೋಣ ಮಳೆಯಿಂದ ತೆಲಂಗಾಣದಲ್ಲಿ7.35 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸೇರಿದಂತೆ 5,000 ಕೋಟಿ ರೂ. ಹಾನಿ ಸಂಭವಿಸಿದೆ ಎಂದು ಪ್ರಾಥಮಿಕ ಹಂತದಲ್ಲಿ ಅಂದಾಜು ಮಾಡಲಾಗಿದೆ.

ಕೇಂದ್ರ ಸರಕಾರವು ರಾಜ್ಯಕ್ಕೆ ತಕ್ಷಣದ 1,500 ಕೋಟಿ ರೂ. ನೆರವು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ ಹಾಗೂ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಹಾನಿಗೊಂಡ ಮನೆಗಳ ದುರಸ್ತಿಗೂ ನೆರವು ನೀಡಲಾಗುವುದು ಎಂದು ಸಿಎಂ ಕೆ.ಚಂದ್ರಶೇಖರ ರಾವ್‌ ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್‌ ತಂಡವು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ.

24 ಗಂಟೆಗಳಲ್ಲಿ ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ, ಪುಣೆ, ಸಾತಾರ, ಕೊಲ್ಹಾಪುರ ಜಿಲ್ಲೆಗಳಲ್ಲಿ 100 ಮಿ.ಮೀ ಮಳೆಯಾಗಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಈವರೆಗೆ ತೆಲಂಗಾಣದಲ್ಲಿ ಶೇ.143 ಅಧಿಕ ಹಾಗೂ ಮಹಾರಾಷ್ಟ್ರದಲ್ಲಿ ಶೇ.43ರಷ್ಟು ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ದಶಕದ ಮಳೆ ಒಂದೇ ಬಾರಿಗೆ ಸುರಿದಿದ್ದು ಜನರ ಬದುಕನ್ನು ಹೈರಾಣಾಗಿಸಿದೆ.

Exit mobile version