ಕೇರಳಕ್ಕೆ 10 ವರ್ಷದ ಬಳಿಕ ಕೇಂದ್ರದ ಅನುದಾನ

ತಿರುವನಂತಪುರ, ನ. 06: ಕೇರಳ ಸರ್ಕಾರ ಹತ್ತು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಕೇಂದ್ರ ಸರ್ಕಾರದಿಂದ ಸಾಕ್ಷರತಾ ಆಂದೋಲನಕ್ಕಾಗಿ ಅನುದಾನ ಪಡೆಯಲಿದೆ.

ದೇಶದಲ್ಲಿ 2030ರ ವೇಳೆಗೆ ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ‘ಪಡ್ನಾ ಲಿಖ್ನಾ’ ಅಭಿಯಾನ ಆರಂಭಿಸಿದ್ದು, ಈ ಅಭಿಯಾನದ ಅಡಿಯಲ್ಲಿ ಕೇರಳ ಸರ್ಕಾರ ಕೇಂದ್ರದಿಂದ ಅನುದಾನ ಪಡೆಯಲಿದೆ. ಕೇರಳ ಶೇ.100 ಸಾಕ್ಷರತಾ ಪ್ರಮಾಣ ಸಾಧಿಸಿದ ರಾಜ್ಯವಾಗಿದ್ದು, ಇದೀಗ ಹತ್ತು ವರ್ಷಗಳ ಬಳಿಕ ಸಾಕ್ಷರತಾ ಯೋಜನೆಗಾಗಿ ಕೇಂದ್ರದಿಂದ ನಿಧಿಯನ್ನು ಸ್ವೀಕರಿಸುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಕೆಎಸ್‌ಎಲ್‌ಎಂಎ ನಿರ್ದೇಶಕ ಪಿ.ಎಸ್‌.ಶ್ರೀಕಲಾ, ಕೇರಳವೂ ಕೇಂದ್ರ ಸರ್ಕಾರದ ಹೊಸ ‘ಫಡ್ನಾ ಲಿಖ್ನಾ’ ಅಭಿಯಾನದ ಭಾಗವಾಗಿದ್ದು, ಇದು ಒಟ್ಟು 4.74 ಕೋಟಿ ಮೌಲ್ಯದ ಯೋಜನೆ ಪಡೆಯಲಿದೆ. ಇದರಲ್ಲಿ ಕೇಂದ್ರವು 2.84 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 1.90 ಕೋಟಿ ರೂ. ಅನುದಾನ ನೀಡಲಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲಾಗಿರುವ ವೈನಾಡ್‌, ಇಡುಕ್ಕಿ, ಪಾಲಕ್ಕಾಡ್‌ ಹಾಗೂ ಮಲಪ್ಪುರಂಗಳಲ್ಲಿ 1.15 ಲಕ್ಷ ಅನಕ್ಷರಸ್ಥರಿದ್ದು, ಅಲ್ಲಿ ಮೊದಲ ಹಂತದಲ್ಲಿ ಅಭಿಯಾನ ಆರಂಭಿಸಲಾಗುವುದು. ಆದರೆ 2011ರ ಗಣತಿ ಪ್ರಕಾರ 6,12,624 ಮಂದಿ ಅನಕ್ಷರಸ್ಥರಿದ್ದು, ಇವರಲ್ಲಿ 4,27,166 ಮಂದಿ ಮಹಿಳೆಯರಿದ್ದಾರೆ ಎನ್ನಲಾಗಿದೆ.

Exit mobile version