ಕೊರೊನಾ ಚಿಕಿತ್ಸಾ ಉಪಕರಣಗಳ ಖರೀದಿ ಹೆಸರಲ್ಲಿ ಸರ್ಕಾರದಿಂದ ಲೂಟಿ: ನ್ಯಾಯಾಂಗ ತನಿಖೆಗೆ ಆಗ್ರಹ

ವೈದ್ಯಕೀಯ ಉಪಕರಣ ಖರೀದಿಯಲ್ಲಿ ಬಿಜೆಪಿ ಸರ್ಕಾರ 2000 ಕೋಟಿ ರೂ. ಹಗರಣ ಮಾಡಿದ್ದು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಮಾಜಿ ಸಚಿವ ರಮಾನಾಥ್ ರೈ ಆಗ್ರಹಿಸಿದ್ದಾರೆ.

ಮಡಿಕೇರಿ ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ದೇಶದಲ್ಲಿ ಆರಂಭದಲ್ಲಿ 560 ಕೊರೊನಾ ಪ್ರಕರಣ ಇದ್ದರೆ, ರಾಜ್ಯದಲ್ಲಿ ಕೇವಲ ಒಂದು ಪ್ರಕರಣ ಇತ್ತು. ಆದರೆ ಈಗ ದೇಶದಲ್ಲಿ 16 ಲಕ್ಷದಷ್ಟು ಪ್ರಕರಣ ಮತ್ತು ರಾಜ್ಯದಲ್ಲಿ 1 ಲಕ್ಷದ 24 ಸಾವಿರದಷ್ಟು ಪ್ರಕರಣಗಳಿವೆ. ಈ ನಡುವೆ ಸಮರ್ಥವಾಗಿ ಕೊರೊನಾ ಪರಿಸ್ಥಿತಿ ಎದುರಿಸಿದ್ದೇವೆ ಎನ್ನುತ್ತಿರುವ ಬಿಜೆಪಿ ಸರ್ಕಾರ,  ಸುಮಾರು 2000 ಕೋಟಿಯಷ್ಟು ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದರು.

ತಮಿಳುನಾಡಿನಲ್ಲಿ ಸುಮಾರು 4 ಲಕ್ಷ ರೂ. ನೀಡಿ ಒಂದು ವೆಂಟಿಲೇಟರ್ ಖರೀದಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಪಿಎಂ ಕೇರ್ಸ್ ನಿಧಿಯ ಯೋಜನೆಯಲ್ಲಿ ಸುಮಾರು 5 ಲಕ್ಷದಿಂದ 18 ಲಕ್ಷದವರೆಗೆ ಒಂದು ವೆಂಟಿಲೇಟರ್‌ಗೆ ದರ ತೋರಿಸಲಾಗಿದೆ. ಅದರೊಂದಿಗೆ ಪಿಪಿಇ ಕಿಟ್‌ನಲ್ಲೂ ಭ್ರಷ್ಟಾಚಾರ ನಡೆದಿದ್ದು, ಕಳಪೆ ಗುಣಮಟ್ಟದ ಕಿಟ್‌ಗಳನ್ನು ನೀಡಲಾಗಿದೆ ಎಂದು ವೈದ್ಯರೇ ಆರೋಪಿಸಿದ್ದಾರೆ. ಜೊತೆಗೆ 50-60 ರೂ.ಗೆ ದೊರೆಯುವ ಮಾಸ್ಕ್‌ನ್ನು 120-150 ರೂ. ನೀಡಿ ಖರೀದಿಸಲಾಗಿದೆ ಎಂದು ಆರೋಪಿಸಿದರು.

2-3 ಸಾವಿರ ರೂ.ಗಳಿಗೆ ದೊರೆಯುವ ಥರ್ಮಲ್ ಸ್ಕ್ಯಾನರ್‌ನ್ನು 5945 ರೂ. ನೀಡಿ ಖರೀದಿಸಲಾಗಿದೆ. ಆಕ್ಸಿಜನ್ ಉಪಕರಣಗಳನ್ನು ಕೇರಳದಲ್ಲಿ 2,65,000 ನೀಡಿ ಖರೀದಿಸಿದರೆ ನಮ್ಮ ರಾಜ್ಯದಲ್ಲಿ 4,36,000 ರೂ. ನೀಡಿ ಖರೀದಿಸಲಾಗಿದೆ. ಇದರೊಂದಿಗೆ ರ‍್ಯಾಪಿಡ್ ಟೆಸ್ಟ್ ಕಿಟ್, ಹಾಸಿಗೆ, ದಿಂಬು, ಹಾಲು, ಆಹಾರದಲ್ಲೂ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದರು.ಸಿದ್ದರಾಮಯ್ಯ ಈ ಬಗ್ಗೆ ಆರೋಪ ಮಾಡಿದಾಗ ನಾವು ಕೇವಲ 324 ಕೋಟಿಯಷ್ಟು ಮಾತ್ರ ಉಪಕರಣ ಖರೀದಿಸಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಬಳಿಕ ಅದೇ ಪಕ್ಷದ ನಾಯಕರು 2000 ಕೋಟಿಯಷ್ಟು ಲೆಕ್ಕಾಚಾರವನ್ನು ನೀಡುತ್ತಿದ್ದಾರೆ. ಈ ಬಗ್ಗೆ ತನಿಖೆಗೆ ಆಗ್ರಹಿಸಿದರೆ ಸರ್ಕಾರ ಮಾತ್ರ ಒಪ್ಪುತ್ತಲೇ ಇಲ್ಲ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ಮೂಲಕ ತನಿಖೆಗೆ ಆಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

Exit mobile version