ಕೊರೊನಾ ಸೋಂಕಿತರಿಗೆ ಉಪಚುನಾವಣೆಯಲ್ಲಿ ಮತದಾನದ ಅವಕಾಶ

ಬೆಂಗಳೂರು, ಅ.13: ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆಯ ತಯಾರಿ ಭರದಿಂದ ಸಾಗುತ್ತಿದ್ದು, ಕೊರೋನಾ ಸೋಂಕಿತರಿಗೂ ಮತದಾನದ ಅವಕಾಶ ನೀಡಬೇಕೆನ್ನುವ ಸಲುವಾಗಿ, ರಾಜ್ಯ ಚುನಾವಣಾ ಆಯೋಗ ಸೋಂಕಿತ ಮತದಾರರಿಗಾಗಿ ಅಂಚೆ  ಮೂಲಕ ಹಕ್ಕು ಚಲಾವಣೆಗೆ ಸಿದ್ಧತೆ ನಡೆಸಿದೆ.

80 ವರ್ಷ ಮೇಲ್ಪಟ್ಟವರಿಗೆ, ವಿಕಲಚೇತನರಿಗೆ ಮತ್ತು ಕೋವಿಡ್ ಶಂಕಿತರಿಗೆ-ಸೋಂಕಿತರಿಗೆ  ಅಂಚೆ ಮತದಾನದ ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಮತಗಟ್ಟೆಗೆ ಆಗಮಿಸುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಮತಗಟ್ಟೆ ಸಿಬ್ಬಂದಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ಆಸನದ ವ್ಯವಸ್ಥೆ ಮಾಡಿಕೊಳ್ಳಬೇಕು, ಎಂಬ ನಿಯಮವನ್ನು ಕೂಡ ಆಯೋಗ ಮಾಡಿದೆ.

ಇವರು ಫಾರಂ 12 ಡಿ ಮೂಲಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು. ಚುನಾವಣಾ ಅಧಿಕಾರಿಗಳು ಇವರು ಇರುವಲ್ಲಿಗೆ ಹೋಗಿ ಅರ್ಜಿ ಸ್ವೀಕರಿಸಿ ಅಂಚೆ ಮತದಾನಕ್ಕೆ ಅರ್ಹರೇ ಎಂದು ಪರಿಶೀಲನೆ ನಡೆಸಬೇಕು. ನಿಗದಿತ ಮತದಾನದ ವೇಳೆಗೆ ಚುನಾವಣಾ ಅಧಿಕಾರಿ ಅಂಚೆ ಮತಪತ್ರಗಳನ್ನು ತಲುಪಿಸಿ  ಕ್ಷೇತ್ರದಲ್ಲಿ ಮತದಾನಕ್ಕೆ ನಿಗದಿಪಡಿಸಿದ ದಿನಾಂಕದ ಮೊದಲು ಅದನ್ನು ಮತದಾರರಿಂದ ಸಂಗ್ರಹಿಸಲು ವ್ಯವಸ್ಥೆ ಮಾಡಬೇಕಾಗುತ್ತದೆ.

ಸೋಂಕಿತ ಅಥವಾ ವೃದ್ಧ ಮತದಾರರಿಂದ ಅಂಚೆ ಮತ ಪತ್ರದ ಅರ್ಜಿಯೊಂದಿಗೆ ಪ್ರಮಾಣ ಪತ್ರದ ಪ್ರತಿ ಅಥವಾ ಸಮರ್ಥ ಆರೋಗ್ಯ ಅಧಿಕಾರಿಗಳ ಸಲಹೆಯೊಂದಿಗೆ ಅರ್ಜಿದಾರರು ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಥವಾ ಕೋವಿಡ್ -19 ಕಾರಣದಿಂದಾಗಿ ರಾಜ್ಯದೊಳಗೆ ಸಂಪರ್ಕ ತಡೆ ಅಥವಾ ಕ್ವಾರಂಟೈನ್ ಇದ್ದರೇ ಎಂಬುದನ್ನು ಪ್ರಮಾಣಪತ್ರದ ಮೂಲಕ ತೋರಿಸಬೇಕು.

ಅಂತೆಯೇ ಮತದಾರರ ಭೇಟಿ ದಿನಾಂಕ ಮತ್ತು ಅಂದಾಜು ಸಮಯದ ಬಗ್ಗೆ ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಬೇಕು.  ಉಪಚುನಾವಣೆ ವೇಳೆ ಮುಖ ಕವಚ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡುವುದು, ಮತದಾನ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಮುಂಜಾಗ್ರತಾ ಕ್ರಮಗಳೊಂದಿಗೆ ಮತದಾನ ಮಾಡಬೇಕು. ಮತ ಚಲಾಯಿಸಲು ಮತದಾನ ಕ್ಷೇತ್ರಕ್ಕೆ ಆಗಮಿಸುವ ಮತದಾರರನ್ನು ಆಶಾ ಕಾರ್ಯಕರ್ತರು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಬೇಕು ಎಂದು ಸೂಚಿಸಿದೆ.

Exit mobile version