ಗಾನಗಂಧರ್ವನ ಗಾನಯಾನ

ಚೆನ್ನೈ : ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ ಸಂಕ್ಷಿಪ್ತವಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ, ಬಹುಶಃ ಇವರ ಹೆಸರು ಕೇಳದ ಭಾರತೀಯ ಸಂಗೀತ ಪ್ರೇಮಿಗಳು ಇರಲಿಕ್ಕಿಲ್ಲವೇನೇ? ಸಂಗೀತ ದಿಗ್ಗಜರು, ಸಹ ಗಾಯಕರ ಬಾಯಲ್ಲಿ ಬಾಲು, ಬಾಲು ಸರ್, ಬಾಲುಗಾರು ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.

 ದಢೂತಿ ದೇಹ, ಮೃದು ಮನಸ್ಸು, ಭಾವ ಜೀವಿ, ಸುಮಧುರ ಕಂಠದ ಗಾಯಕ ಎಸ್‌ಬಿಪಿ, ಜನಮೆಚ್ಚಿದ ಗಾಯಕ. ಬಹುಭಾಷೆಯಲ್ಲಿ ಸುಮಧುರವಾಗಿ ಹಾಡಬಲ್ಲ ಈ ಗಾನಗಂಧರ್ವನಿಗೆ ಸಾಟಿಯೇ ಇಲ್ಲ ಬಿಡಿ. ಗಾನಲೋಕದ ಮೇರು ಕಲಾವಿದ ಇಂದು ನಮ್ಮನ್ನಗಲಿದ್ದಾರೆ.  

ಕಳೆದ ತಿಂಗಳು ಆಗಸ್ಟ್ 5ರಂದು ಕೊರೋನಾ ಪಾಸಿಟಿವ್ ಬಂದು ಚೆನ್ನೈಯ ಎಂಜಿಎಂ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನುರಿತ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದರು. ಆಗಾಗ ಅವರ ಆರೋಗ್ಯದಲ್ಲಿ ಒಂದಷ್ಟು ಚೇತರಿಕೆ ಕಂಡುಬರುತ್ತಿತ್ತು. ಆದ್ರೆ ಕೊರೋನಾ ಗೆದ್ದ ಎಸ್‌ಪಿಬಿ, ಸಾವನ್ನು ಗೆಲ್ಲಲಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.

ತಮ್ಮ 55 ವರ್ಷಗಳ ಸುದೀರ್ಘ ಸಂಗೀತ ವೃತ್ತಿ ಬದುಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ. ಎಸ್ ಪಿ ಜನಿಸಿದ್ದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1946ರ ಜೂನ್ 4ರಂದು. ಅವರು ಮೊತ್ತಮೊದಲಿಗೆ ಸಿನೆಮಾದಲ್ಲಿ ಹಾಡಿದ್ದು 1966ರಲ್ಲಿ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲುಗು ಚಿತ್ರದಲ್ಲಿ.

ಎಸ್ ಪಿ ಬಾಲಸುಬ್ರಹ್ಮಣ್ಯಂ ಭಾಷೆ, ಗಡಿಯನ್ನು ಮೀರಿದ ಕಲಾವಿದರಾಗಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡು 16 ಭಾಷೆಗಳಲ್ಲಿ ಅವರಿಗೆ ಸಂಗೀತ ಪ್ರೇಮಿಗಳಿದ್ದಾರೆ. ಹಿಂದಿ ಭಾಷೆಗೆ ಅವರು 1980 ಮತ್ತು 1990ರ ದಶಕದಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಏಕ್ ತುಜೆ ಕೆ ಲಿಯೆಗೆ ಹಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಗೆದ್ದರು.

ಶಾಸ್ತ್ರೀಯ ಸಂಗೀತ ಕಲಿಯದ ಮಹಾನ್ ಗಾಯಕ: ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಶಾಸ್ತ್ರೀಯ ಸಂಗೀತವನ್ನು ಔಪಚಾರಿಕವಾಗಿ ಕಲಿತಿರಲೇ ಇಲ್ಲ. ಈ ಮಾತು ಕೇಳಿದ್ರೆ ನಿಮಗೆ ಅಚ್ಚರಿಯಾಗ್ಬಹುದು, ಆದ್ರೆ ಇದು ಸತ್ಯ. ತೆಲುಗು ಚಿತ್ರ ಶಂಕರಾಭರಣದ ಅವರ ಹಾಡು ಬಹಳ ಜನಪ್ರಿಯ. ತೆಲುಗಿನಲ್ಲಿ ಲಿಂಗಾಷ್ಟಕಂ, ಬಿಲ್ವಾಷ್ಟಕಂ ಸಂಗೀತ ಆಲ್ಬಂಗಳನ್ನು ಹಾಡಿ ಭಜಿಸುವವರು ಇಂದಿಗೂ ಅದೆಷ್ಟೋ ಮಂದಿ. ಇವುಗಳಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಶವಿದೆ.

ಕೇವಲ ಹಿನ್ನೆಲೆ ಗಾಯಕರಾಗಿದ್ದು ಮಾತ್ರವಲ್ಲದೆ 45 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ, ಅಂದರೆ ಸಂಗೀತವನ್ನೂ ರಚಿಸಿದ್ದಾರೆ. ಅದು ತೆಲುಗು, ಕನ್ನಡ, ತಮಿಳು, ಹಿಂದಿ ಭಾಷೆಗಳಲ್ಲಿ ಸಂಗೀತ ರಚಿಸಿ ಸೈ ಎನಿಸಿಕೊಂಡಿದ್ದಾರೆ.

ಬಣ್ಣ ಹಚ್ಚಿ ಮಿಂಚಿದ್ದ ಎಸ್ ಪಿಬಿ: ಎಸ್ ಪಿಬಿಯವರು ಸಕಲ ಕಲಾ ವಲ್ಲಭ. ಇವರು ಕೇವಲ ಗಾಯನಕ್ಕೆ, ನಾಯಕ ನಟರಿಗೆ ಹಾಡಿಗೆ ಧ್ವನಿಯಾಗಿದ್ದು ಮಾತ್ರವಲ್ಲ, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 40ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.

Exit mobile version