ಚಾಮುಂಡಿ ಬೆಟ್ಟದಿಂದ ದಸರಾ ದೀಪಾಲಂಕಾರ ವೀಕ್ಷಣೆಗೆ ಬ್ರೇಕ್‌

ಮೈಸೂರು, ಅ.22: ದಸರಾ ಮಹೋತ್ಸವ ವೇಳೆ ಲಕ್ಷಾಂತರ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಮೈಸೂರಿನ ಸೌಂದರ್ಯವನ್ನು ಚಾಮುಂಡಿಬೆಟ್ಟದ ಮೇಲಿನಿಂದ ವೀಕ್ಷಿಸಿ ಸಂಭ್ರಮಿಸಲು ಮುಂದಾ ಗಿದ್ದವರಿಗೆ ನಿರಾಸೆ ಕಾದಿದೆ. ಜಿಲ್ಲಾಡಳಿತ ಸಂಜೆ 6ರ ಬಳಿಕ ಚಾಮುಂಡಿಬೆಟ್ಟಕ್ಕೆ ಸಾರ್ವ ಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.

ನವರಾತ್ರಿಯ ವೇಳೆ ವಿವಿಧ ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಮೈಸೂರು ನಗರ ಝಗಮಗಿಸುತ್ತಿರುತ್ತದೆ. ಸಂಜೆಯಾಗುತ್ತಿದ್ದಂತೆಯೇ ಬೆಟ್ಟಕ್ಕೆ ತೆರಳಿ ರಾತ್ರಿ ವೇಳೆ ಕಾಣುವ ಮೈಸೂರಿನ ಸೊಬಗನ್ನು ಸವಿಯಲು ಮುಂದಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರ್ಷವೂ ಮೊದಲ 2 ದಿನ ಜನತೆ ಮುಗಿಬಿದ್ದ ಹಿನ್ನೆಲೆಯಲ್ಲಿ ಕೊರೊನಾ ಹರಡುವಿಕೆ ಭಯದಿಂದ ಜಿಲ್ಲಾಡಳಿತ ಸಂಜೆ ವೇಳೆ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.

ಈ ಸಾಲಿನ ದಸರಾ ಮಹೋತ್ಸವದಲ್ಲಿ 2 ಹಂತಗಳಲ್ಲಿ (ಅ.14 ರಿಂದ ನ.1ರವರೆಗೆ) ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸುವ ಮೂಲಕ ಕೋವಿಡ್ -19 ಸೋಂಕು ಹರಡುವಿಕೆ ತಡೆಗೆ ಜಿಲ್ಲಾ ಡಳಿತ ಕ್ರಮ ಕೈಗೊಂಡಿತ್ತು. ಆದರೆ ನವರಾತ್ರಿಯ ಆರಂಭದ ದಿನವಾದ ಅ.17ರಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ರದ್ದುಗೊಳಿಸಿದ್ದರು.

ಅ.18 ಮತ್ತು 19ರಂದು ಚಾಮುಂಡಿಬೆಟ್ಟಕ್ಕೆ ಸಾವಿರಾರು ಮಂದಿ ಬೆಟ್ಟದ ರಸ್ತೆಯುದ್ದಕ್ಕೂ ಮಾಡಲಾಗಿದ್ದ ದೀಪಾಲಂಕಾರ ವೀಕ್ಷಿಸಿದರು. ಅಲ್ಲದೇ, ವ್ಯೂ ಪಾಯಿಂಟ್‍ನಿಂದ ಮೈಸೂರಿನ ದೀಪಾ ಲಂಕಾರವನ್ನು ಕಣ್ತುಂಬಿಕೊಂಡಿದ್ದರು. ಕಳೆದ 5 ದಿನಗಳಿಂದ ದೀಪಾಲಂಕಾರ ವೀಕ್ಷಣೆ ಗಾಗಿ ಸಂಜೆ ವೇಳೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಮೈಸೂರಿನ ಜನರು ಚಾಮುಂಡಿಬೆಟ್ಟಕ್ಕೆ ದಾಂಗುಡಿ ಇಡುತ್ತಿದ್ದಾರೆ. ಇದರಿಂದ ಚಾಮುಂಡಿಬೆಟ್ಟ ಸಂಪರ್ಕಿಸುವ ಮೈಸೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಅಲ್ಲದೇ, ದೀಪಾಲಂಕಾರ ವೀಕ್ಷಣೆಗೆ ಬೆಟ್ಟವೇರುವವರು ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ಭಾನುವಾರ ಮತ್ತು ಸೋಮವಾರ ಚಾಮುಂಡಿಬೆಟ್ಟದಲ್ಲಿ ಸಂಜೆ ವೇಳೆ ಅಪಾರ ಸಂಖ್ಯೆಯ ಪ್ರವಾಸಿಗರು ಕಿಕ್ಕಿರಿದಿದ್ದರು. `ಸುಸ್ವಾಗತ’ ಫಲಕದ ಬಳಿಯೂ ಸಾವಿರಾರು ಮಂದಿ ನೆರೆದಿದ್ದರು. ಇದರಿಂದ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಿರುವುದನ್ನು ಮನಗಂಡ ಜಿಲ್ಲಾಡಳಿತ ಮಂಗಳ ವಾರ ಸಂಜೆ 6ರಿಂದ ಚಾಮುಂಡಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ವಿಧಿಸಿತು.

ಚಾಮುಂಡಿಬೆಟ್ಟದ ಪ್ರವೇಶ ದ್ವಾರದಲ್ಲಿ ತಾವರೆಕಟ್ಟೆ, ನಂದಿ ರಸ್ತೆ, ಉತ್ತನಹಳ್ಳಿ ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಪ್ರವಾಸಿಗರು ಹಾಗೂ ದೀಪಾಲಂಕಾರ ನೋಡಲು ಬರುವವರನ್ನು ತಡೆದು ವಾಪಸ್ ಕಳುಹಿಸುತ್ತಿದ್ದಾರೆ.

Exit mobile version