ಜ್ಞಾನಾರ್ಜನೆಗೆ ಕಾರ್ಯಾಗಾರಗಳು ಉಪಯುಕ್ತ: ಪ್ರೊ. ವೀರಪ್ಪ ಗೌಡ

ಬೆಂಗಳೂರು: ವಿಜ್ಞಾನ ವಿಭಾಗಗಳಲ್ಲಿ ನಡೆಯುವ ಕಾರ್ಯಾಗಾರಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಉಪಯುಕ್ತವಾಗಲಿವೆ ಎಂದು ಬೆಂಗಳೂರಿನ ಟಿಐಎಫ್‌ಆರ್ ಸೆಂಟರ್ ಫಾರ್ ಅಪ್ಲಿಕೇಬಲ್ ಮ್ಯಾಥಮೇಟಿಕ್ಸ್ನ ನಿವೃತ್ತ ಡೀನ್ ಪ್ರೊ.ಜಿ.ಆರ್. ವೀರಪ್ಪ ಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಕೆ.ಆರ್ಪುರದ ಗಣಿತ ಶಾಸ್ತ್ರ ವಿಭಾಗ ವತಿಯಿಂದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ “ಮ್ಯಾಥಮೆಟಿಕಲ್ ಅನಾಲಿಸಸ್” ಎಂಬ ವಿಚಾರ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಣಿತ ಕಷ್ಟಕರವಾದ ವಿಷಯ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದರೆ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಈ ರೀತಿಯ ಕಾರ್ಯಾಗಾರ ಏರ್ಪಡಿಸಿದರೆ ಅದರ ಪ್ರಯೋಜನ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೆ ಗಣಿತದ ಬಗ್ಗೆ ಹೆಚ್ಚಿನ ಒಲವು ಮೂಡಿಸುವುದು ಕೂಡ ಸಾಧ್ಯವಾಗುತ್ತದೆ ಎಂದು ಪ್ರೊ. ವೀರಪ್ಪ ಗೌಡ ಹೇಳಿದರು.

ಗಣಿತ ಶಾಸ್ತ್ರ ದ ತಜ್ಞರಾದ ಪ್ರೊ. ಪಿ.ಜಿ. ಸಿದ್ದೇಶ್ವರ್, ಪ್ರೊ. ಎಂ.ಎಸ್. ಮಹಾದೇವ ನಾಯ್ಕ, ಪ್ರೊ. ಬಿ. ಚೆಲುವರಾಜ್, ಪ್ರೊ. ಎಚ್.ಜಿ. ನಾಗರಾಜ್, ಡಾ. ಶಿವಶರಣಪ್ಪ ಶಿಗರ್‌ಕಂಠಿ ಅವರು ವಿಶೇಷ ಉಪನ್ಯಾಸವನ್ನು ನೀಡಿದರು.

ಕಾರ್ಯಾಗಾರದಲ್ಲಿ ಬೆಂಗಳೂರು ಸೇರಿದಂತೆ ರಾಷ್ಟ್ರದಾದ್ಯಂತದಿಂದ ಇನ್ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ರತಿಭಾ ಪಾರ್ಶ್ವನಾಥನ್ ವಹಿಸಿದ್ದರು. ಗಣಿತ ಶಾಸ್ತ್ರ ವಿಭಾಗದ ಡಾ. ಎಂ.ಸಿ. ಮಹೇಶ್ ಕುಮಾರ್ ಕಾರ್ಯಾಗಾರದ ಸಂಯೋಜಕರಾಗಿದ್ದರು. ಪ್ರೊ. ಆಶಾ ಟಿ.ವಿ. ಕಾರ್ಯಾಗಾರದ ಸಂಘಟಕರಾಗಿದ್ದರು.

ಮೂರು ದಿನಗಳ ಕಾರ್ಯಾಗಾರದ ನಿರೂಪಣೆಯನ್ನು ಡಾ. ತ್ಯಾಗರಾಜ್ ನಿರ್ವಹಿಸಿದರು. ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಡಾ. ಎಚ್.ಜಿ. ದೀಪಕ್, ಪ್ರೊ. ರೂಪಾ, ಡಾ. ಕೆ.ನಾರಾಯಣ, ಪ್ರೊ. ನರಸೋಜಿ ರಾವ್, ಪ್ರೊ. ಬಸವರಾಜ್, ಪ್ರೊ. ಲೋಕೇಶ್, ಡಾ. ಫ್ರಾನ್ಸೀಸ್ ಮರಿಯಾ ಆನಂದ್ ಮುಂತಾದವರು ಉಪಸ್ಥಿತರಿದ್ದರು. ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ನವದೆಹಲಿಯ ಭಾರತೀಯ ರಾಷ್ಟ್ರೀಯ

 ವಿಜ್ಞಾನ ಅಕಾಡೆಮಿ, ಪ್ರಯಾಗ್‌ರಾಜ್‌ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಸಹಯೋಗದಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

Exit mobile version