ತೀರ್ಥೋದ್ಭವಕ್ಕೂ ಆವರಿಸಿದ ಕೊರೊನಾ ಕರಿನೆರಳು

ನವರಾತ್ರಿಯ ಜತೆಗೆ ಇಂದು ತುಲಾ ಸಂಕ್ರಮಣವೂ ಹೌದು. ನಮ್ಮ ಭಾರತೀಯ ಹಿಂದೂ ಪರಂಪರೆಯಲ್ಲಿ ತುಲಾ ಸಂಕ್ರಮಣಕ್ಕೆ ವಿಶೇಷ ಮಾನ್ಯತೆ ಇದೆ. ಪ್ರತಿವರ್ಷದಂತೆ ಈ ವರ್ಷವು ತುಲಾ ಸಂಕ್ರಮಣವೂ ನವರಾತ್ರಿ ಮೊದಲನೇ ದಿನದಂದು ಬಂದಿರುವುದು ಇನ್ನು ವಿಶೇಷ. ಅದರಲ್ಲೂ ಕರ್ನಾಟಕದ ಕೊಡಗಿನಲ್ಲಂತೂ ವಿಶೇಷ ಸಂಭ್ರಮ ಸಡಗರ ಮನೆ ಮಾಡುತ್ತದೆ. 

ತುಲಾ ಮಾಸದ ಪ್ರಥಮ ದಿನವಾದ ಇಂದು ಅನೇಕ ಭಕ್ತಾದಿಗಳು ತಲಕಾವೇರಿಗೆ ಆಗಮಿಸಿ, ಪವಿತ್ರ ತೀರ್ಥದಲ್ಲಿ ಮಿಂದೆದ್ದು, ಪುಳಕಿತರಾಗುತ್ತಾರೆ.  ಅದೇ ರೀತಿ  ಇಂದು ಬೆಳ್ಳಂಬೆಳಗ್ಗೆ 7.05ರ ಸುಮಾರಿಗೆ ತೀರ್ಥೋದ್ಭವವಾಗಿದ್ದು, ಈ ವರ್ಷದ ಕೊರೊನಾ ವಿಶ್ವದಾದ್ಯಂತ ಆವರಿಸುವುದರಿಂದ ಭಕ್ತಾದಿಗಳಿಗೆ ನಿರ್ಬಂಧವನ್ನು ಹೇರಲಾಗಿತ್ತು ಈ ನಿಟ್ಟಿನಲ್ಲಿ ಈ ವರ್ಷ ಭಕ್ತಾದಿಗಳ ಸಂಖ್ಯೆಯೂ ಇಳಿಮುಖವಾಗಿದ್ದು ಸ್ಪಷ್ಟ ಕಂಡು ಬರುತ್ತದೆ. ಭಕ್ತಾದಿಗಳಿಲ್ಲದೇ ತಲಕಾವೇರಿ ಬಿಕೋ ಎನ್ನುತ್ತಿರುವುದಂತು ಸತ್ಯ. ಆದರೆ ಜಿಲ್ಲಾಡಳಿತವು, ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನೇರ ಪ್ರಸಾರ ನೀಡಲು ತಿಳಿಸಿದೆ.

ಅಂತೂ ಈ ವರ್ಷದ ತೀರ್ಥೋದ್ಭವದ ವಿಜೃಂಭಣೆ ಕಳೆಗುಂದಿದ್ದು, ಅಧಿಕಾರಿಗಳಿಗೆ ಹಾಗೂ ಪೂಜಾ ಕೈಂಕರ್ಯ ಕೈಗೊಳ್ಳುವವರಿಗೆ ಮೊದಮೊದಲು ಸೀಮಿತವಾದರೂ ಕೊನೆಗೆ ಭಕ್ತಾದಿಗಳಿಗೆ ಅವಕಾಶವನ್ನು ನೀಡಲಾಗಿತ್ತು. ತೀರ್ಥಸ್ನಾನದ ಅವಕಾಶದಿಂದ ಭಕ್ತಾದಿಗಳು ವಂಚಿತರಾದರೂ, ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಂದು ತೀರ್ಥ ಪ್ರೋಕ್ಷಣೆಯನ್ನು ಮಾಡಿಕೊಂಡು, ತೆಗೆದುಕೊಂಡು ಹೋಗಲು ಅವಕಾಶ ನೀಡಲಾಯಿತು.

ಏನಿದರ ವಿಶೇಷತೆ?

ತುಲಾಸಂಕ್ರಮಣವು ಕರ್ನಾಟಕದ ಕೊಡಗಿನ ತಲಕಾವೇರಿಯಲ್ಲಿನ ತೀರ್ಥೋದ್ಭವವು ವಿಶೇಷ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ವಿಶೇಷ ದಿನದಂದು ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವವಾಗುತ್ತದೆ ಎಂಬ ಪ್ರತೀತಿ ಇದೆ. ಇದು ಪ್ರತಿವರ್ಷವು ತುಲಾ ಸಂಕ್ರಮಣದಂದು ನಡೆಯುವ ಚಮತ್ಕಾರವಾಗಿದೆ. ಇಂದು ಇಲ್ಲಿ ಭಕ್ತಿಯಿಂದ ತೀರ್ಥ ಸ್ನಾನ ಮಾಡಿದವರೇ ಧನ್ಯರೆಂದು ನಂಬಲಾಗುತ್ತದೆ. ಈ ದಿನದಂದು ದೇಶದ ಬೇರೆ ಬೇರೆ ಕಡೆಯಿಂದ ಜನರು ಆಗಮಿಸಿ ತೀರ್ಥಸ್ನಾವನ್ನು ಮಾಡುತ್ತಾರೆ. ಈ ದಿನವು ಕೊಡಗಿನಲ್ಲಿ ನಡೆಯುವ ಒಂದು ತಿಂಗಳ ಕಾವೇರಿ ಜಾತ್ರೆಗೆ ನಾಂದಿ ಹಾಡುತ್ತದೆ. ಇಲ್ಲಿ ತೀರ್ಥಸ್ನಾನದ ನಂತರವೇ ಒಂದು ತಿಂಗಳ ಕಾವೇರಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ದಿನದಂದು ಇಲ್ಲಿ ದೇವಿಗೆ ವಿಶೇಷ ಪೂಜೆ ನಡೆಸುತ್ತಾರೆ. ಈ ಪೂಜೆಯ ವಿಶೇಷತೆ ಎಂದರೆ, ಕೆಂಪು ರೇಷ್ಟಮೆ ಬಟ್ಟೆಯಿಂದ ಸುತ್ತಿದ ತೆಂಗಿನಕಾಯಿ ಅಥವಾ ಸೌತೆಕಾಯಿಯನ್ನು ಕಾವೇರಿ ದೇವಿಯ ಸಂಕೇತವಾಗಿ ಪೂಜಿಸುತ್ತಾರೆ. ವೈಭವೋಪೇತವಾಗಿ ದೇವಿಯನ್ನು ಹೂವು ಮತ್ತು ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಅದರಲ್ಲೂ ವಿಶೇಷ ಆಭರಣವೆಂದರೆ ಮಂಗಲಸೂತ್ರದಿಂದ ದೇವಿಯನ್ನು ಅಲಂಕರಿಸಲಾಗುತ್ತದೆ. ಈ ಪೂಜೆಯನ್ನು ಕುನ್ನಿ ಪೂಜೆ ಎನ್ನಲಾಗುತ್ತದೆ. ಈ ಹಬ್ಬವು ಕೊಡವರು ಆಚರಿಸುವ ವಿಶೇಷ ಹಬ್ಬ.

ಇತಿಹಾಸ:  

ಹಿಂದೂ ಪುರಾಣಗಳಲ್ಲಿನ ಉಲ್ಲೇಖದ ಪ್ರಕಾರ, ಕವೇರ ರಾಜನ ತಪಸ್ಸಿನಿಂದ ಪಡೆದ ಮಗಳೇ ಲೋಪಾಮುದ್ರಾ. ಇವಳನ್ನು ಕವೇರ ರಾಜನು ಸಾಕುವುದರಿಂದ ಕಾವೇರಿ ಎಂದು ಜನಜನಿತಳಾಗುತ್ತಾಳೆ. ಅವಳು ತನ್ನ ಜೀವನವನ್ನೇ ಲೋಕೋದ್ಧಾರಕ್ಕಾಗಿ ಮುಡಿಪಾಗಿಡಬೇಕೆಂಬ ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾಳೆ. ಮುಂದೆ ಲೋಪಾಮುದ್ರಾಳನ್ನು ಅಗಸ್ತ್ಯಮುನಿಯು ವರಿಸಲು ಇಚ್ಛಿಸುತ್ತಾನೆ. ಆದರೆ ಲೋಪಾಮುದ್ರೆ ಒಂದು ಹಂತದಲ್ಲಿ ನಿರಾಕರಿಸಿದರೂ ಶರತ್ತನ್ನು ಹಾಕಿಕೊಂಡು ಮದುವೆಯಾಗಲು ಒಪ್ಪುತ್ತಾಳೆ. ಮದುವೆಯ ನಂತರ ಎಂದಿಗೂ ನನ್ನನ್ನು ಕಾಯಿಸಬಾರದು. ಕಾಯಿಸದರೆ ನನ್ನಿಚ್ಛೆಯಂತೆ ನಾನು ಸ್ವತಂತ್ರಳಾಗುತ್ತೇನೆಂದು ಶರತ್ತು ಹಾಕುತ್ತಾಳೆ. ಈ ಶರತ್ತಿನಂತೆ ಮದುವೆಯಾಗುತ್ತಾಳೆ.   

ದಕ್ಷಿಣ ಘಟ್ಟ ಪ್ರದೇಶದಲ್ಲಿ ಹುಟ್ಟಿದ ಇವಳು ಒಂದು ದಿನ ಅಗಸ್ತಯಮುನಿಯು ತನ್ನ ಶಿಷ್ಯರಿಗೆ ಪಾಠ ಮಾಡುವುದರಲ್ಲಿ ತಲ್ಲೀನರಾಗಿದ್ದು ಈ ಸಮಯದಲ್ಲಿ  ದಕ್ಷಿಣ ಪ್ರಾಂತ್ಯದಲ್ಲಿ ಜನ ನೀರಿಲ್ಲದೆ ಜಲಕ್ಷಾಮಕ್ಕೆ ತ್ತುತ್ತಾಗಿ ಸಂಕಟದಲ್ಲಿದ್ದರು. ಇದನ್ನು ಮನಗಂಡ ಲೋಪಾಮುದ್ರೆಯು  ಲೋಕೋದ್ಧಾರಕ್ಕಾಗಿ ನದಿಯಾಗಿ ಹರಿದಳು. ಆದ್ದರಿಂದ ಪ್ರತಿವರ್ಷ ಈ ದಿನದಂದು ಕಾವೇರಿ ಮಾತೆಯು ತೀರ್ಥ ರೂಪದಲ್ಲಿ ಉದ್ಭವಿಸುತ್ತಾಳೆ ಎಂಬ ವಾಡಿಕೆಯಿದೆ. ಇದನ್ನು ಜನರು  ಭಕ್ತಿ ಭಾವದಿಂದ ನಂಬಿಕೊಂಡು ಬಂದು ವಿಶೇಷವಾಗಿ ಆಚರಿಸುತ್ತಾ ಬಂದಿರುವುದು ವಾಡಿಕೆ. 

Exit mobile version