ತೆರೆಯ ಮೇಲೆ `ಚಿರಂಜೀವಿ’ ಸರ್ಜಾ

ಸಿನಿಮಾ ಕಲಾವಿದರಿಗೆ ಸಾವಿಲ್ಲ ಎನ್ನುತ್ತಾರೆ. ಯಾಕೆಂದರೆ ಸಿನಿಮಾಗಳು ಅವರನ್ನು ಎಂದೆಂದಿಗೂ ಜೀವಂತವಾಗಿ ಇರಿಸುತ್ತವೆ. ಯುವನಟ ಚಿರಂಜೀವಿ ಸರ್ಜಾ ನಿಧನಕ್ಕೆ ಮೊದಲು ತೆರೆಕಂಡಿದ್ದ ಕೊನೆಯ ಚಿತ್ರ ಶಿವಾರ್ಜುನ' ಆಗಿತ್ತು. ಚಿತ್ರ ಥಿಯೇಟರಲ್ಲಿ ಇರಬೇಕಾದರೇನೇ ಕೊರೊನಾ ಕಾರಣ ಲಾಕ್ಡೌನ್ ಘೋಷಿಸಲಾಗಿತ್ತು.

ಹಾಗೆ ಥಿಯೇಟರ್ ಮುಚ್ಚಿದ್ದಾಗಲೇ ಚಿರು ಕೂಡ ಹೃದಯಾಘಾತದಿಂದ ಸಾವಿಗೊಳಗಾಗಿದ್ದರು. ಆರು ತಿಂಗಳಷ್ಟು ದೀರ್ಘವಾಗಿ ಮುಚ್ಚಿದ್ದ ಪರದೆ ಈ ವಾರ ಸರಿಯಲಿದೆ. ಅದರಲ್ಲಿಯೂ ಚಿರಂಜೀವಿ ಸರ್ಜಾ ನಟನೆಯಶಿವಾರ್ಜುನ’ ಬಿಡುಗಡೆ ಕಾಣಲಿದೆ ಎನ್ನುವುದು ವಿಶೇಷ. ಈ ಬಗ್ಗೆ ಸೋಮವಾರ ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿತು.

ಚಿತ್ರದ ನಿರ್ಮಾಪಕ ಶಿವಾರ್ಜುನ ಮಾತನಾಡಿ, “ಇದು ನಾನು ನಿರ್ಮಾಣ ಮಾಡಿದ ಮೊದಲ ಸಿನಿಮಾ. ಮಾ. 12ಕ್ಕೆ ಅದ್ಧೂರಿಯಾಗಿ ಬಿಡುಗಡೆ ಮಾಡಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನುತ್ತಿರುವಾಗಲೇ ಲಾಕ್​ಡೌನ್​ ಆಯಿತು. ಇದೀಗ ಮತ್ತೆ ಅದೇ ಸಿನಿಮಾವನ್ನು ಅ. 16ರಂದು ಮರು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈಗಲೂ ಅದೇ ಅದ್ದೂರಿತನದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಿದ್ದೇವೆ” ಎಂದರು.

ನಿರ್ದೇಶಕ ಶಿವತೇಜಸ್​, ಚಿರು ಸರ್ಜಾ ಅವರ ಅನುಪಸ್ಥಿತಿಯಲ್ಲಿ ಈ ಸುದ್ದಿಗೋಷ್ಠಿ ನಡೆಯುತ್ತಿರಬಹುದು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ. ಬದಲಿಗೆ ಸ್ಪೂರ್ತಿಯಾಗಿ ನಮ್ಮೆಲ್ಲರ ಜತೆ ಸದಾ ಇರುತ್ತಾರೆ. ಸಿನಿಮಾ ಮೂಲಕ ಇಂದಿಗೂ ಅವರು ಜೀವಂತವಾಗಿದ್ದಾರೆ. ಇಂಥ ಸಮಯದಲ್ಲಿ ನಾವು ಚಿತ್ರರಸಿಕರಿಗೆ ಕೇಳಿಕೊಳ್ಳುವುದೊಂದೇ. ಚಿತ್ರಮಂದಿರಗಳು ತೆರೆಯುತ್ತಿವೆ.

ಮತ್ತೆ ಬನ್ನಿ ಸಿನಿಮಾ ನೋಡಿ” ಎಂದರು.ಹಿರಿಯ ನಟಿ ತಾರಾ ಅವರು ಕೂಡ ನೋವಿನಲ್ಲೇ ಮಾತಿಗಿಳಿದರು. “ಈಗ ಸಿನಿಮಾಮಂದಿರ ತೆರೆಯುತ್ತಿದೆ ಎಂದು ಖುಷಿಯಲ್ಲಿ ಮಾತನಾಡಬೇಕೋ ಅಥವಾ ಚಿರು ಇಲ್ಲದೇ ಈ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿರುವುದಕ್ಕೆ ಬೇಸರದಿಂದ ಮಾತನಾಡಬೇಕೋ ಎಂಬುದು ಗೊತ್ತಾಗುತ್ತಿಲ್ಲ.

ನಿಜಕ್ಕೂ 2020 ವರ್ಷ ಚಿತ್ರರಂಗದ ಮಟ್ಟಿಗೆ ಕರಾಳ ವರ್ಷವಾಗಿದೆ. ಸಾವು ನೋವು ಒಂದೆಡೆಯಾದರೆ, ಕರೊನಾ ಆಘಾತ ಮತ್ತೊಂದು ಕಡೆ. ಇದೆಲ್ಲವನ್ನು ದಾಟಿಕೊಂಡು ಇದೀಗ ನಮ್ಮ ಚಿರಂಜೀವಿ ಶಿವಾರ್ಜುನನಾಗಿ ಮತ್ತೆ ಬಂದಿದ್ದಾನೆ. ಖಂಡಿತವಾಗಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬೇಕು” ಎಂದರು. ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್​, ಸಂಗೀತ ನಿರ್ದೇಶಕ ಸುರಾಗ್​, ನಿರ್ಮಾಪರಾದ ಉದಯ್​ ಮೆಹ್ತಾ ಮರು ಬಿಡುಗಡೆ ಬಗ್ಗೆ ಮಾತನಾಡಿದರು.

ಶಿವ ತೇಜಸ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಿವಾರ್ಜುನ ಚಿತ್ರವನ್ನು ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಕವಿರಾಜ್, ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸುರಾಗ್ ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲಾ ಹಿನ್ನಲೆ ಸಂಗೀತ, ಹೆಚ್.ಸಿ. ವೇಣು ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ. ತಾರಾ, ಅವಿನಾಶ್, ಕುರಿ ಪ್ರತಾಪ್, ರವಿ ಕಿಶನ್, ಶಿವರಾಜ್ ಕೆ.ಆರ್.ಪೇಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version