ದಸರಾ ಅಂತಿಮ ಸಿದ್ಧತೆ ಪರಿಶೀಲಿಸಿದ ಸಚಿವರು

ಚಾಮುಂಡಿ ಬೆಟ್ಟದಲ್ಲಿ ದಸರಾ ಅಂತಿಮ ಸಿದ್ಧತೆಯನ್ನು ಪರಿಶೀಲಿಸುತ್ತಿರುವ ಸಚಿವ ಎಸ್‌. ಟಿ ಸೋಮಶೇಖರ್‌

ಮೈಸೂರು, ಅ.16: ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶನಿವಾರ ಉದ್ಘಾಟನೆಗೊಳ್ಳಲಿರುವ ದಸರಾ ಕಾರ್ಯಕ್ರಮದ ಅಂತಿಮ ಸಿದ್ಧತೆಗಳನ್ನು ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪರಿಶೀಲನೆ ನಡೆಸಿದರು.

ವೇದಿಕೆ ಹಾಗೂ ವೇದಿಕೆ ಮುಂಭಾಗದಲ್ಲಿ ಮಾಡಲಾಗಿರುವ ವ್ಯವಸ್ಥೆಗಳು, ಆಸನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದ ಸಚಿವರು, ಬಳಿಕ ಬೆಳ್ಳಿ ಪಲ್ಲಕ್ಕಿಯನ್ನು ವೀಕ್ಷಿಸಿ ಚಾಮುಂಡೇಶ್ವರಿ ಸನ್ನಿಧಿಯ ಪ್ರಧಾನ ಅರ್ಚಕರಿಂದ ಮಾಹಿತಿ ಪಡೆದುಕೊಂಡರು. ಡಿಸಿಪಿ ಗೀತಾಪ್ರಸನ್ನ ಅವರು ಸಿದ್ಧತೆಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಕೈಗೊಳ್ಳಲಾದ ಭದ್ರತಾ ವ್ಯವಸ್ಥೆಗಳ ಬಗ್ಗೆ ಸಚಿವ ಎಸ್‌. ಟಿ ಸೋಮಶೇಖರ್ ಅವರ ಗಮನಕ್ಕೆ ತಂದರು.

ಸಾರ್ವಜನಿಕರ ಸಹಕಾರ ಅಗತ್ಯ:

ತಜ್ಞರ ತಂಡ ಸೂಚನೆ ನೀಡಿದಂತೆ 200 ಜನರಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ ವಿಶಾಲವಾಗಿ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಿಂತ ಹೆಚ್ಚು ಮಂದಿಯನ್ನು ಕಾರ್ಯಕ್ರಮಕ್ಕೆ ಆಮಂತ್ರಣ ಮಾಡಿಲ್ಲ. 35 ವಿವಿಐಪಿಗಳಿಗೆ ಒಂದು ಕಡೆ ಆಸನ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮದವರಿಗೂ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಡಿಮೆ ಜನಕ್ಕೆ ಮಾತ್ರ ಅವಕಾಶ ನೀಡಿದ್ದರಿಂದ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಚಿವರು ತಿಳಿಸಿದರು.

ಸಂಜೆ 7ರಿಂದ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಭಾಗವಹಿಸಲಿದ್ದಾರೆ. ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರನ್ನು ಹೊರತುಪಡಿಸಿದರೆ ಉಳಿದ ಸಚಿವರು ಕೋವಿಡ್ ಹಿನ್ನೆಲೆಯಲ್ಲಿ ಬರುತ್ತಿಲ್ಲ ಎಂದು ತಿಳಿಸಿದ್ದಾಗಿ ಸಚಿವರಾದ ಸೋಮಶೇಖರ್ ಮಾಹಿತಿ ನೀಡಿದರು.

ಮನೆಯಲ್ಲೇ ಕುಳಿತು ಲೈವ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ:

ಸಾರ್ವಜನಿಕರ ಸಹಕಾರವನ್ನು ನಾವು ಈ ಕೋವಿಡ್ ಸಂದರ್ಭದಲ್ಲಿ ಕೋರುತ್ತಿದ್ದೇವೆ. ಕಾರ್ಯಕ್ರಮವನ್ನು ಲೈವ್ ಮುಖಾಂತರ ನೀಡಲಾಗುತ್ತಿರುವುದರಿಂದ ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ವೀಕ್ಷಣೆ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಹೊರಗಡೆ ಗುಂಪು ಗುಂಪಾಗಿ ಕಾಣಿಸಿಕೊಳ್ಳಬಾರದು. ಒಟ್ಟಾಗಿ ನಿಂತು ಸೆಲ್ಫೀ ತೆಗೆದುಕೊಳ್ಳುವಂತಹ ಕ್ರಮಕ್ಕೂ ಬ್ರೇಕ್ ಹಾಕಲಾಗಿದೆ ಎಂದು ಸಚಿವರು ತಿಳಿಸಿದರು.

ಮುಂದಿನ ಬಾರಿ ವಿಜೃಂಭಣೆಯ ದಸರಾ

ಪ್ರಸಕ್ತ ಸಾಲಿನಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ. ಸರಳವಾಗಿ ಆಚರಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಕೋವಿಡ್‌ಗೆ ಯಾವುದೇ ಲಸಿಕೆ ಇನ್ನೂ ತಯಾರಾಗದ ಹಿನ್ನೆಲೆಯಲ್ಲಿ ಹೆಚ್ಚು ಜನರನ್ನು ಸೇರಿಸಲು ಆಗದು. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರಾಯೋಗಿಕ ಹಂತದಲ್ಲಿರುವ ಲಸಿಕೆ ಮಾರುಕಟ್ಟೆ ಪ್ರವೇಶಿಸಲಿದೆ. ಆದ್ದರಿಂದ ಮುಂದಿನ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಚಿವರು ತಿಳಿಸಿದರು. ಇದೇ ವೇಳೆ ಶಾಸಕರಾದ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಉಪಸ್ಥಿತರಿದ್ದರು.

Exit mobile version