ದೇಶದಲ್ಲಿ ಒಂದೇ ದಿನ ದಾಖಲೆಯ 4.20 ಲಕ್ಷ ಕೊರೊನಾ ಪರೀಕ್ಷೆ

ಒಂದು ದಿನದ ಅವಧಿಯಲ್ಲಿ ಅತಿ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ನಡೆಸುವ ಮೂಲಕ ಭಾರತ ದಾಖಲೆ ಸೃಷ್ಟಿಸಿದೆ. ಒಂದೇ ದಿನದಲ್ಲಿ 4.20 ಲಕ್ಷ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿದೆ.

ಜನವರಿಯಲ್ಲಿ ಭಾರತದಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಮಾದರಿ ಪರೀಕ್ಷೆಗೆ ಕೇವಲ ಒಂದು ಪ್ರಯೋಗಾಲಯ ಮಾತ್ರ ಲಭ್ಯವಿತ್ತು. ಆದರೆ, ಈಗ ಖಾಸಗಿ ಪ್ರಯೋಗಾಲಯಗಳನ್ನು ಒಳಗೊಂಡು ಲ್ಯಾಬ್‌ಗಳ ಸಂಖ್ಯೆ 1,301ಕ್ಕೆ ಏರಿಕೆಯಾಗಿದೆ. ಐಸಿಎಂಆರ್‌ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾರ್ಗಸೂಚಿ ಹಾಗೂ ಎಲ್ಲ ರಾಜ್ಯಗಳ ಶ್ರಮದ ಫಲವಾಗಿ ಸಮರೋಪಾದಿಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ ಎಂದು ಆರೋಗ್ಯ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಇದುವರೆಗೆ ಭಾರತದಲ್ಲಿ 1,58,49,068 ಕೋವಿಡ್‌ ಪರೀಕ್ಷೆಗಳು ನಡೆದಿವೆ. ಕಳೆದ ಒಂದು ವಾರದಿಂದ ಪ್ರತಿದಿನ 3.50 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ನಡೆದ ದಾಖಲೆ ಪ್ರಮಾಣದ 4,20,898 ಕೋವಿಡ್‌ ಪರೀಕ್ಷೆ ವರದಿಯೂ ಇದರಲ್ಲಿ ಸೇರಿದೆ ಎನ್ನಲಾಗಿದೆ. ಪರೀಕ್ಷೆ (ಟೆಸ್ಟ್‌), ಹಿನ್ನೆಲೆ (ಟ್ರ್ಯಾಕ್‌) ಮತ್ತು ಚಿಕಿತ್ಸೆ (ಟ್ರೀಟ್‌)ಯನ್ನು ಸಮರ್ಥವಾಗಿ ನಿರ್ವಹಿಸುವಂತೆ ಸಚಿವಾಲಯ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.

ದೇಶಾದ್ಯಂತ ಕೋವಿಡ್‌-19 ಪರೀಕ್ಷೆಯು ಏರುಗತಿಯಲ್ಲಿ ಸಾಗಿದ್ದು, ಸೋಂಕಿತರ ಸಾವಿನ ಪ್ರಮಾಣ ಶೇ. 2.35ಕ್ಕೆ ಇಳಿಕೆಯಾಗಿದೆ. ಅಲ್ಲದೇ, ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗುತ್ತಿರುವವರ ಸಂಖ್ಯೆಯ ಪ್ರಮಾಣವು ಶೇ. 63.54ಕ್ಕೆ ಏರಿದೆ. ʻಭಾರತ ವಿಶ್ವದಲ್ಲೇ ಅತಿ ಕಡಿಮೆ ಸಾವಿನ (ಕೋವಿಡ್‌ ಸೋಂಕಿತರ ಸಾವು) ಪ್ರಮಾಣವನ್ನು ಹೊಂದಿದ ರಾಷ್ಟ್ರವಾಗಿದೆʼ ಎಂದು ಆರೋಗ್ಯ ಸಚಿವಾಲಯ ಉಲ್ಲೇಖಿಸಿದೆ. ಸದ್ಯ ದೇಶಾದ್ಯಂತ 8,49,431 ಸೋಂಕಿತರು ಗುಣಮುಖರಾಗಿದ್ದು, 3,93,360 ಸಕ್ರಿಯ ಪ್ರಕರಣಗಳಿವೆ.

Exit mobile version