ನಕಲಿ ಟಿಆರ್‌ಪಿ ಹಗರಣ: ಹನ್ಸ್ ರಿಸರ್ಚ್ ಗ್ರೂಪ್‌ನ ಮಾಜಿ ಸಿಬ್ಬಂದಿ ಬಂಧನ

ಮುಂಬೈ, ಅಕ್ಟೋಬರ್ 13: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಹನ್ಸ್ ರಿಸರ್ಚ್ ಗ್ರೂಪ್‌ನ ಮಾಜಿ ಸಿಬ್ಬಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ್‌ನಲ್ಲಿ ವಿನಯ್ ತ್ರಿಪಾಠಿಯನ್ನು ಬಂಧಿಸಲಾಗಿದ್ದು, ಒಟ್ಟಾರೆಯಾಗಿ ಐವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ, ಬಾಕ್ಸ್ ಸಿನಿಮಾ ಹಾಗೂ ಫಕ್ತ್ ಮರಾಠಿ ವಾಹಿನಿ ಹಾಗೂ ಅದರ ಮುಖ್ಯಸ್ಥರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಬಳಕೆದಾರರಿಗೆ ಹಣ ಹಂಚಿಕೆ ಹಾಗೂ ಟಿವಿ ಚಾನೆಲ್‌ಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ವಿನಯ್ ತ್ರಿಪಾಠಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನುವುದು ಮುಂಬೈ ಪೊಲೀಸರ ವಾದವಾಗಿದೆ. ಹನ್ಸ್ ರಿಸರ್ಚ್ ಗ್ರೂಪ್‌ನ ಸಿಇಒ ಹೇಳಿಕೆಯನ್ನು ಕೂಡ ಪಡೆಯಲಾಗಿದೆ, ಮತ್ತು ದೂರುದಾರರ ಹೇಳಿಕೆಯನ್ನೂ ಪರಿಗಣಿಸಿ ದಾಖಲಿಸಲಾಗಿದೆ.

ಇನ್ನೊಂದೆಡೆ ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್ ಕಂಚನ್‌ದಾನಿ ಹಾಗೂ ವಾಹಿನಿಯ ಪ್ರಸರಣ ಮುಖ್ಯಸ್ಥ ಘನಶ್ಯಾಂ ಸಿಂಗ್ ಅವರ ಹೇಳಿಕೆಯನ್ನು ಸತತ ಎರಡನೇ ಬಾರಿ ದಾಖಲಿಸಿಕೊಳ್ಳಲಾಗಿದೆ.

ಮುಂಬೈ ಪೊಲೀಸರ ಪ್ರಕಾರ ಬಂಧಿತ ವಿಶಾಲ್ ಭಂಡಾರಿ ಹೇಳಿದಂತೆ ವಿನಯ್ ತ್ರಿಪಾಠಿಯ ಬಳಕೆದಾರರಿಗೆ ಹಣ ಹಂಚುವುದರ ಜತೆಗೆ ನಿರ್ದಿಷ್ಟ ಚಾನೆಲ್‌ಗಳನ್ನು ನೋಡುವಂತೆ ಸೂಚನೆ ನೀಡುತ್ತಿದ್ದ, ಹೀಗಾಗಿ ತ್ರಿಪಾಠಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಈಗಾಗಲೇ ರಿಪಬ್ಲಿಕ್ ಸಿಒಒ ಹರ್ಷ್ ಭಂಡಾರಿಯನ್ನು ಭಾನುವಾರ ವಿಚಾರಣೆ ನಡೆಸಲಾಗಿದೆ.

ವಿನಯ್ ತ್ರಿಪಾಠಿ ಹನ್ಸ್ ರಸರ್ಚ್ ಗ್ರೂಪ್‌ನ ಸಿಬ್ಬಂದಿಯಾಗಿದ್ದಾಗ ಟಿಆರ್‌ಪಿಯಲ್ಲಿ ವ್ಯತ್ಯಾಸವಾಗುತ್ತಿರುವುದರ ಬಗ್ಗೆ ಹನ್ಸ್ ಸಂಸ್ಥೆಗೆ ಸಂದೇಹ ಬಂದಿತ್ತು, ಇದರಲ್ಲಿ ತ್ರಿಪಾಠಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನದ ಮೇರೆಗೆ ತನಿಖೆಗೆ ಆದೇಶಿಸಿತ್ತು. ಇದನ್ನರಿತ ವಿನಯ್ ತ್ರಿಪಾಠಿ ಕೆಲಸವನ್ನು ಬಿಟ್ಟಿದ್ದ.

Exit mobile version