ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನ ಹೆಚ್ಚಿಸಿ: ಎಚ್ಡಿಕೆ

ಬೆಂಗಳೂರು: ಸರ್ಕಾರ ಭರವಸೆ ನೀಡಿದ್ದಂತೆ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನವನ್ನು ಕನಿಷ್ಠ ಐದು ಸಾವಿರ ರೂಪಾಯಿ ಹೆಚ್ಚಳ ಮಾಡಬೇಕು. ಲಾಕ್‌ಡೌನ್‌ ಸಂದರ್ಭದಲ್ಲಿ ತಡೆಹಿಡಿದಿದ್ದ ಗೌರವಧನದ ಬಾಕಿಯನ್ನು ತಕ್ಷಣವೇ ನೀಡಬೇಕು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನವನ್ನು ಕನಿಷ್ಠ 15 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದ 14 ವಿಧಾನಪರಿಷತ್ ಸದಸ್ಯರುಗಳಿಗೆ ನೀಡಿದ್ದ ಭರವಸೆಯನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹದಿನೈದು ಸಾವಿರ ಅತಿಥಿ ಉಪನ್ಯಾಸಕರು ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿ ಸರ್ಕಾರ 15000 ರೂ.ಗಳ ಮಾಸಿಕ ಗೌರವಧನ ನೀಡುವ ಭರವಸೆಯನ್ನು ಕೂಡಲೇ ಜಾರಿ ಮಾಡಬೇಕು. ಕಳೆದ ಸಲದ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ಎಲ್ಲರನ್ನೂ ಮತ್ತೆ ಮರು ನೇಮಕ ಮಾಡಿಕೊಳ್ಳುವ ಮೂಲಕ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರಿಗೆ ಸರ್ಕಾರ ನೆರವಾಗಬೇಕು ಎಂದಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಮಕ್ಕಳ ಹಿತದೃಷ್ಟಿಯಿಂದ ಮೂರು ವಾರಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಡೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʻಕಳೆದೊಂದು ವಾರದಿಂದ ಶಿಕ್ಷಕ ಸಮುದಾಯದ ನಾನಾ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಕಂಡು ನನ್ನ ಮನಸು ವಿಹ್ವಲಗೊಂಡಿತ್ತು. ನನ್ನ ಭಾವನೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಶಿಕ್ಷಕರ ವೃತ್ತಿ ಗೌರವಕ್ಕೆ ಸಮರ್ಪಿಸಿದ ಗುರುದಕ್ಷಿಣೆʼ ಕುಮಾರಸ್ವಾಮಿ ಅವರು ಟ್ವೀಟ್‌ ಮಾಡಿದ್ದಾರೆ.

Exit mobile version