ಮಾಸ್ಕ್ ಹೆಸರಲ್ಲಿ ಸರ್ಕಾರದಿಂದಲೇ ಜನರ ಲೂಟಿ

ಬೆಂಗಳೂರು: ಸರ್ಕಾರ ಇದೀಗ ಮಾಸ್ಕ್ ಹಾಕದವರಿಗೆ ಸಾವಿರ ರೂಪಾಯಿ ದಂಡವನ್ನು ಘೋಷಣೆ ಮಾಡಿದೆ. ದುಡಿದು ತಿನ್ನುವ ಜನ ಸಾಮಾನ್ಯರಿಗೆ ಬದುಕು ನಡೆಸಲು ಕಷ್ಟವಾದ ಈ ಸಂದರ್ಭದಲ್ಲಿ ಸಾವಿರ ರೂ ದಂಡ ವಿಧಿಸುವುದು ಎಷ್ಟು ಸರಿ?

 ಕೊರೋನಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರಕಾರ ಪ್ರತಿಯೊಬ್ಬ ಪ್ರಜೆಯೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿತ್ತು. ಮಾಸ್ಕ ಧರಿಸದೆ ರಸ್ತೆಗಿಳಿದವರಿಗೆ 200 ರೂ ದಂಡವನ್ನೂ ನಿಗದಿ ಪಡಿಸಿತ್ತು.  ಸರ್ಕಾರ ನಿಗದಿ ಪಡಿಸಿದ ಈ ಮೊತ್ತದಿಂದ ಕೋಟ್ಯಾಂತರ ರೂಪಾಯಿಗಳು ಸರ್ಕಾರದ ಬೊಕ್ಕಸಕ್ಕೆ ಹರಿದು ಬಂತು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ  ದಂಡದ ಹಣ ಜುಲೈ ತಿಂಗಳೊಂದರಲ್ಲೇ 58 ಲಕ್ಷ ರೂ ಸಂಗ್ರಹವಾಗಿದೆ. ಈ ಕುರಿತ ಮಾಹಿತಿಯನ್ನು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಅವರು ತಿಳಿಸಿದ್ದಾರೆ.

ಆಯ್ದುಕೊಂಡು ತಿನ್ನುವವನ ಬಳಿ ಕಿತ್ತುಕೊಂಡು ತಿಂದರಂತೆ ಎನ್ನುವ ಗಾದೆ ಮಾತಿನಂತೆ ಜನರನ್ನು ರಕ್ಷಿಸಬೇಕಾಗಿರುವ ಸರ್ಕಾರವೇ ಜನರಿಂದ ಹಗಲು ದರೋಡೆ ಮಾಡುತ್ತಿದೆ.  ಈ ಹಿಂದೆ ಹಾಕಿದ ದಂಡದಿಂದ ಬೊಕ್ಕಸ ತುಂಬಿಸಿಕೊಂಡ ಸರ್ಕಾರ ಇದೀಗ 1000 ರೂ ದಂಡ ವಿದಿಸಿದೆ, ಗ್ರಾಮೀಣ ಭಾಗದಲ್ಲಿ 500 ರೂ ಹೆಚ್ಚಳ ಮಾಡಿದೆ ಇದು ಜನರಿಂದ ದರೋಡೆ ಮಾಡುವ ಉದ್ದೇಶವಾಗಿದೆ.

ಇದುವರೆಗೆ ಜನರಿಗೆ ಸರ್ಕಾರ ಮಾಸ್ಕ್ ವಿತರಣೆ ಮಾಡಿಲ್ಲ. ಜನರನ್ನು ಹೆದರಿಸಿ ಬೆದರಿಸಿ ಕೋಟ್ಯಾಂತರ ರೂಪಾಯಿಗಳನ್ನು ಸುಲಿಗೆ ಮಾಡಿ ನುಂಗಿ ನೀರು ಕುಡಿದಿದೆ. ಬಿಬಿಎಂಪಿ ನೇಮಿಸಿರುವ ಮಾರ್ಷಲ್ ಗಳು ಗೂಂಡಾಗಳಂತೆ ವರ್ತಿಸಿ ಜನರನ್ನು ಹೆದರಿಸುವ ಹೊರತು ಅರಿವು ಮಾಡಿಸುತ್ತಿಲ್ಲ,ವಲಸೆ ಕಾರ್ಮಿಕರನ್ನು, ಕೂಲಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸಕ್ಕೆ ರೂ 350ರಿಂದ ರೂ 400 ಇದೆ. ಇಂತಹ ಕಡೆ ರೂ 500 ದಂಡ ವಿದಿಸಿದರೆ ಪಿಡಿಒ ಗಳು ಲೂಟಿ ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗಿದೆ, ಎಂದು ಆಮ್ ಆದ್ಮಿ ಕಿಡಿಕಾರಿದೆ.

Exit mobile version