ಮೃತ ಕೊರೊನಾ ವಾರಿಯರ್ಸ್‌ನ್ನು ಹುತಾತ್ಮರೆಂದು ಕರೆಯಬೇಕು: ಡಾ.ಸಿ.ಎನ್.ಮಂಜುನಾಥ್

ಮೈಸೂರು, ಅ.16: ಕೊರೊನಾ ವಾರಿಯರ್ಸ್‌ ಮೃತರಾದರೆ ಅವರನ್ನು ಹುತಾತ್ಮರೆಂದು ಕರೆಯಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‌ ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಹುತಾತ್ಮ ಯೋಧರಿಗೆ ಸಿಗುವ ಗೌರವ ಮೃತ ಕೊರೊನಾ ವಾರಿಯರ್ಸ್‌ಗೂ ಸಿಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನನಗಾಗಿ ನಾನು ಏನನ್ನೂ ಚಾಮುಂಡಿ ದೇವಿಯ ಬಳಿ ಬೇಡಿಲ್ಲ. ಕೊರೊನಾ ಲಸಿಕೆ ಬೇಗ ಬರಲಿ, ಕೊರೊನಾ ಸಂಪೂರ್ಣ ನಿವಾರಣೆಯಾಗಲಿ, ಜಲಪ್ರವಾಹ ಕಡಮೆಯಾಗಲಿ ಎಂದು ದೇವರ ಬಳಿ ಬೇಡಿದ್ದೇನೆ ಎಂದರು.

ಚೀನಾದಲ್ಲಿ ಸೃಷ್ಟಿಯಾದ ವೈರಸ್ ಇಡೀ ಪ್ರಪಂಚವನ್ನೇ ನಡುಗಿಸಿದೆ. ಅನೇಕ ಜನರ ಬದುಕನ್ನೇ ಕಿತ್ತುಕೊಂಡಿದೆ, ಯೋಗ್ತಿಂಯವಲ್ದಲದ ಆಹಾರವನ್ನ ತಿಂದರೆ ಹೇಗೆ ಹೊಸ ವೈರಸ್ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಈ ವೈರಸ್ ಸಾಕ್ಷಿ ಎಂದು ಚೀನಾ ವಿರುದ್ಧ ಹರಿಹಾಯ್ದರು.

ಕೊರೊನಾಗೆ ಈ ವರ್ಷ ಲಸಿಕೆ ಬರುವ ಲಕ್ಷಣಗಳಿಲ್ಲ. ಮುಂದಿನ‌ ವರ್ಷದ ಫೆಬ್ರವರಿ, ಮಾರ್ಚ್‌ನಲ್ಲಿ ಲಸಿಕೆ ಬರಬಹುದು. ಕೊರೊನಾ ಪಾಸಿಟಿವ್ ಬಂದರೆ ಅವರನ್ನು ಅಸ್ಪೃಶ್ಯರಂತೆ ಕಾಣಬೇಡಿ. ವೈದ್ಯರೇ ರೋಗಿಗಳಾಗುತ್ತಿದ್ದಾರೆ‌, ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ವೈದ್ಯರ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ನಿಲ್ಲಿಸಬೇಕು. ವೈದ್ಯರಿಗೆ ಗ್ರಾಮೀಣ ಭಾಗದಲ್ಲಿ ರಕ್ಷಣೆ ಸಿಗುತ್ತಿಲ್ಲ. ಹೀಗಾಗಿ, ವೈದ್ಯರು ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವುದಲ್ಲದೇ, ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಹೊರಗಿಟ್ಟು ಜಿಲ್ಲಾ ಕೇಂದ್ರದಿಂದ ನಿರ್ವಹಣೆ ಮಾಡಿಸಬೇಕು ಎಂದು ಆಗ್ರಹಿಸಿದರು. ಜಯದೇವ ಆಸ್ಪತ್ರೆಯಲ್ಲಿ ಈವರೆಗೆ 50 ಲಕ್ಷ ಜನರಿಗೆ ಚಿಕಿತ್ಸೆ ಕೊಟ್ಟಿದ್ದೇವೆ. 5 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದರು.

ಕನ್ನಡ ಕಣ್ಣಾಗಿರಬೇಕೆ ಹೊರತು ಕನ್ನಡಕವಾಗಬಾರದು. ಜಗತ್ತಿನಲ್ಲಿ ಬದುಕುವ ಭಾಷೆ ಇಂಗ್ಲಿಷ್ ಆಗಿದೆ. ಎರಡರ ನಡುವೆ ಸಮತೋಲನವಾಗಬೇಕು ಎಂದು ಅಭಿಪ್ರಾಯಪಟ್ಟರು. ಸಾಮಾಜಿಕ‌ ಜಾಲತಾಣಗಳು ಸಮಾಜ‌ ಕಟ್ಟಬೇಕಿತ್ತು. ಆದರೆ, ಅವು ಸಮಾಜವನ್ನು ತಪ್ಪು ದಾರಿಗೆ ತಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ದಸರಾ ಉದ್ಘಾಟಿಸಿದ್ದು ನನ್ನ ಜೀವಿತಾವಧಿಯ ದೊಡ್ಡ ಗೌರವ. ಕೊರೊನಾ ವಾರಿಯರ್ಸ್‌ ಅಭಿನಂದನೆಯು ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವ ಎಂದು ಸ್ಮರಿಸಿದರು.

ಇದೇ ವೇಳೆ ಕೊರೊನಾ ವಾರಿಯರ್ಸ್ ಗಳಾದ ಡಾ.ಟಿ.ಆರ್‌. ನವೀನ್, ಹಿರಿಯ ಶುಶ್ರೂಷಕಿ ರುಕ್ಮಿಣಿ, ಪೊಲೀಸ್ ಕಾನ್ ಸ್ಟೇಬಲ್ ಕುಮಾರ್, ಪೌರಕಾರ್ಮಿಕ ಮಹಿಳೆ ಮರಗಮ್ಮ, ಆಶಾ ಕಾರ್ಯಕರ್ತೆ ನೂರ್ ಜಾನ್, ಸಮಾಜ ಸೇವಕ ಅಯೂಬ್ ಅಹಮದ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.‌ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Exit mobile version