ರಾಜ್ಯದಲ್ಲಿ ಅನೈತಿಕ ರಾಜಕಾರಣ ಸೃಷ್ಠಿಯಾಗಿದ್ದೇ ಯಡಿಯೂರಪ್ಪ ಅವರಿಂದ: ಸಿದ್ದರಾಮಯ್ಯ ಕಿಡಿ

ಒಂದು ವರ್ಷ ಪೂರೈಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವಲ್ಲಿ, ಕೊರೊನಾ ಸಮಸ್ಯೆ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಜನರ ಆಶಿರ್ವಾದದಿಂದ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲ ಎಂಬ ರಾಜಕೀಯ ಅನೈತಿಕತೆ ಆರಂಭವಾಗಿದ್ದೇ ಯಡಿಯೂರಪ್ಪ ಸರ್ಕಾರದಲ್ಲಿ. ಜೆಡಿಎಸ್ ಶಾಸಕರನ್ನು ಹಣ ಕೊಟ್ಟು ಖರೀದಿಸಿ, ಹಿಂಭಾಗಿಲ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ಗೌರವ ವಿಲ್ಲ. ಅಕ್ರಮ ಹಣದಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಹೊಸದಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ನಮ್ಮ ಕಾರ್ಯಕ್ರಮಗಳನ್ನೇ ಮುಂದುವರಿಸಿದ್ದಾರೆ. ಅಲ್ಪಸಂಖ್ಯಾತರ ಅನುದಾನ ಕಡಿತಗೊಳಿಸಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಒಂದು ಯೋಜನೆಗಳನ್ನು ಪೂರೈಸಿಲ್ಲ. ರಾಜ್ಯ ಸರ್ಕಾರದ ಸಾಧನೆ ಏನು? ಅಧಿಕಾರಕ್ಕೆ ಬಂದ ಮೂರು ತಿಂಗಳು ಯಡಿಯೂರಪ್ಪ ಅವರೇ ಒಬ್ಬರೇ ಇದ್ದರೂ, ಸಚಿವರೇ ಇರಲಿಲ್ಲ. ಸಚಿವರೇ ಇಲ್ಲದಿದ್ದರೆ ಸರ್ಕಾರ ಎಲ್ಲಿ ನಡೆಯುತ್ತದೆ. ಬಳಿಕ ಮಂತ್ರಿ ಮಂಡಲ ರಚನೆ ಕಸರತ್ತು ನಡೆಯಿತು., ನಂತರ ಕೊರೊನಾ ಎದುರಾಯಿತು. ಹೀಗಿರುವಾಗ ಸರ್ಕಾರ ಎಲ್ಲಿದೆ? ಇದು ಬಿಜೆಪಿ ಅವರ ಸಾಧನೆ ಟೀಕಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಮೂರು ಗಂಡಾಂತರಗಳು ಎದುರಾಗಿದೆ ಪ್ರವಾಹ, ಬರಗಾಲ ಹಾಗೂ ಕೊರೊನಾಗಳು ಬಂದಿವೆ. ಹೀಗಾಗಿ ಒಂದು ವರ್ಷದಿಂದ ಸರ್ಕಾರವೇ ಇಲ್ಲದಂತಾಗಿದೆ. 2019ರಲ್ಲಿ ಎದುರಾದ ಪ್ರವಾಹದಿಂದ ಸಾವಿರಾರು ಕೋಟ್ಯಾಂತರ ರೂ. ನಷ್ಟವಾಯಿತು. ಕೇಂದ್ರ ಸರ್ಕಾರದ ಈ ನಷ್ಟಕ್ಕೆ ಸರಿಯಾದ ಪರಿಹಾರವನ್ನು ನೀಡಲಿಲ್ಲ. ಪ್ರವಾಹದಿಂದ ಸಂತ್ರಸ್ತರಿಗೆ ಸರಿಯಾಗಿ ಮನೆ ಕಟ್ಟಿಕೊಡಲಿಲ್ಲ, ಸರಿಯಾದ ಪರಿಹಾರವನ್ನು ನೀಡಲಿಲ್ಲ. ಹೀಗಾಗಿ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ನಂತರ ಎದುರಾಗಿರುವ ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರ್ಕಾರ ಲಾಕ್‍ ಡೌನ್ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಯಾಂತರ ರೂ. ಹಣ ಖರ್ಚು ಮಾಡಿದ್ದರೂ, ಕೊರೊನಾ ನಿಯಂತ್ರಿಸಲು ಸಾಧ್ಯವಾಗಿಲ್ಲ. ಖರ್ಚು ಮಾಡಿರುವ ಬಗ್ಗೆ ಲೆಕ್ಕಾ ಕೇಳಿದರೆ ಅದಕ್ಕೂ ಉತ್ತರ ನೀಡುತ್ತಿಲ್ಲ. ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರಕ್ಕೆ ಎಲ್ಲಾ ಸಹಕಾರ ನೀಡಿದರೂ, ನಮ್ಮ ಸಲಹೆಗಳಿಗೆ ಯಾವುದೇ ಮನ್ನಣೆ ನೀಡಲಿಲ್ಲ ಎಂದು ದೂರಿದರು.

ಈ ನಡುವೆ ಕೊರೊನಾ ಚಿಕಿತ್ಸೆಗಾಗಿ ಖರ್ಚು ಮಾಡಿರುವ ಹಣದಲ್ಲಿ ಅವ್ಯವಹಾರ ನಡೆದಿರುವ ವಿಷಯ ತಿಳಿದ ಬಳಿಕ ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಆರೋಪ ಮಾಡಿದ್ದೇವೆ. ಕೋಟ್ಯಾಂತರ ರೂ. ಖರ್ಚು ಮಾಡಿದ್ದರೂ, ಕೊರೊನಾ ಸೋಂಕಿತರಿಗೆ ಬೆಡ್‍, ವೆಂಟಿಲೇಟರ್‍ ಸೇರಿದಂತೆ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಇದೇ ವಿಷಯವಾಗಿ ನಾನು ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಸಹಿತವಾಗಿ ಆರೋಪ ಮಾಡಿದ್ದೇವೆ ಎಂದರು. ರೋಗ ನಿಯಂತ್ರಿಸಲು, ಕಡಿವಾಣ ಹಾಕುವುದಕ್ಕೆ ನಮ್ಮ ಸಹಕಾರ ಇದೆ. ಲೂಟಿ ಹೊಡೆಯಲು ಸಹಕಾರ ನೀಡಬೇಕೇ?. ದೇಶದಲ್ಲಿ ಹಲವು ಸರ್ಕಾರಗಳು ಕೊರೊನಾ ನಿಯಂತ್ರಣ ಮಾಡಿದ್ದು, ಆರ್ಥಿಕ ಸುಧಾರಣೆ ಮಾಡುವ ವಿಷಯದಲ್ಲಿ ಸರ್ಕಾರ, ಕಾರ್ಮಿಕರು, ಅಸಂಘಟಿತರು ಇತರರಿಗೆ 10 ಸಾವಿರ ರೂ. ನೀಡಿ ಎಂದು ಹೇಳಿದ್ದೆ. ಅದನ್ನು ಸಹ ಯಡಿಯೂರಪ್ಪ ಮಾಡಲಿಲ್ಲ.  

ಕೊರೊನಾ ಸಂಕಷ್ಟದ ನಡುವೆಯೇ ರೈತ ವಿರೋಧ ಸುಗ್ರೀವಾಜ್ಞೆ ಜಾರಿಗೊಳಿಸಿದೆ.  ಆ ಮೂಲಕ ರಿಯಲ್‍ ಎಸ್ಟೇಟ್ ಏಜೆಂಟರು, ಹೌಸಿಂಗ್ ಸೊಸೈಟಿಗಳ ಲಾಭಿಗೆ ಮಣಿದಿದೆ. ಇದು ರೈತರಿಗೆ ಮಾಡಿರುವ ದೊಡ್ಡ ದ್ರೋಹವಾಗಿದ್ದು, ಇದರಿಮದ ಉಳ್ಳವರೇ ಭೂಮಿಯ ಒಡೆಯ ಎಂಬಂತಾಗಿದೆ. ಇದನ್ನೆಲ್ಲಾ ಗಮನಿಸಿದರೆ ಈ ಸರ್ಕಾರ ಬಡವರು, ಕಾರ್ಮಿಕರು, ಕೃಷಿಕರ ಪರವಾಗಿಲ್ಲ. ಬದಲಿಗೆ ಕೈಗಾರಿಕೋದ್ಯಮಿಗಳು, ಬಂಡವಾಳಶಾಹಿಗಳ ಪರವಾಗಿರುವ ಸರ್ಕಾರ ಎಂಬುದು ತಿಳಿಯುತ್ತಿದೆ. ಕೆಟ್ಟ ಉದ್ದೇಶದಿಂದ ಈ ಕಾಯ್ದೆ ಮಾಡಲು ಸರ್ಕಾರ ಮುಂದಾಗಿದ್ದು, ಈ ಬಗ್ಗೆಯೂ ನ್ಯಾಯಾಲಯಕ್ಕೆ ಹೋಗುವ ಚಿಂತನೆ ಇದೆ ಎಂದರು.

Exit mobile version