ರಾಹುಲ್ ಗಾಂಧಿ ಹೇಳಿಕೆಗೆ ನಿರ್ಮಲಾ ಸೀತಾರಾಮನ್ ತಿರುಗೇಟು

ನವದೆಹಲಿ ಆ 26 : ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ (ಎನ್ಎಂಪಿ) ಯೋಜನೆಗೆ ರಾಷ್ಟ್ರಾದ್ಯಂತ ಸಾಕಷ್ಟು ಪರ ಮತ್ತು ವಿರೋಧಗಳು ಕೇಳಿ ಬರುತ್ತಿದ್ದು, ಈ ಯೋಜನೆಗೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಮಾತನಾಡಿ ಒಂದೆಡೆ ಬಿಜೆಪಿ 70 ವರ್ಷಗಳಲ್ಲಿ ಏನೂ ಆಗೇ ಇಲ್ಲ ಎಂದು ಹೇಳುತ್ತದೆ. ಆದರೆ ಈಗ ಆ ಅವಧಿಯಲ್ಲಿ ಸೃಷ್ಟಿಯಾದ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಿದ್ದರು. ಇವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್ ಸಂಪತ್ತು ಕ್ರೋಢೀಕರಣ ಎಂದರೆ ರಾಹುಲ್ ಗಾಂಧಿಗೆ ಏನುಗೊತ್ತು ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ದೇಶದ ಆಸ್ತಿ ಮಾರಾಟ ಮಾಡಿ ಹಣ ಗಳಿಸಿದವರು ನೀವು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಂಬೈ ಪುಣೆ ಹೆದ್ದಾರಿ ನಗದೀಕರಣ ಮೂಲಕ 8 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು ಇದಕ್ಕೆ ರಾಹುಲ್ ಗಾಂಧಿ ಏಕೆ ಪ್ರತಿಕ್ರಿಯಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ (ಎನ್ಎಂಪಿ)

ಕೇಂದ್ರ ಸಚಿವೆ ನಿಮರ್ಲಾ ಸೀತಾರಾಮನ್ ಘೋಷಿಸಿರುವಂತೆ ಮುಂದಿನ 4 ವರ್ಷದಲ್ಲಿ ರಸ್ತೆ, ರೈಲು, ವಿಮಾನ ನಿಲ್ದಾಣಗಳು, ಕಲ್ಲಿದ್ದಲ ಗಣಿ, ಕ್ರೀಡಾಂಗಣ, ಟೆಲಿಕಾಂ, ಜನತಾ ಕಾಲೋನಿಗಳು, ಗ್ಯಾಸ್ ಪೈಪ್‍ಲೈನ್‍ಗಳನ್ನು ಖಾಸಗಿ ಬಳಕೆಗೆ ಅವಕಾಶ ಕೊಡುತ್ತೇವೆ ಎಂದಿದ್ದಾರೆ.  ಸರ್ಕಾರಿ ಆಸ್ತಿಯ ನಗದೀಕರಣದಿಂದ ಹೊಸ ಮೂಲಸೌಕರ್ಯ ಸೃಷ್ಟಿಯಾಗುತ್ತೆ. ಅಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇದು ಅಗತ್ಯವಾಗಿದೆ. ಆ ಮೂಲಕ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡಲಾಗುತ್ತದೆ ಎಂಬುವುದು ಸರ್ಕಾರದ ಸ್ಪಷ್ಟನೆಯಾಗಿದೆ.

Exit mobile version