ಆಕ್ಸ್ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಹೊಸ ಸಂಶೋಧನೆಯಲ್ಲಿ ವಿಡಿಯೋ ಗೇಮ್ನಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂಬ ಹೊಸ ಅಂಶ ಬಯಲಾಗಿದೆ. ಇದು ವಿಡಿಯೋ ಗೇಮ್ ಆಡೋರಿಗೆ ಸಿಹಿ ಸುದ್ದಿ ಕೊಟ್ಟಂತಾಗಿದೆ.
ಇದು ವಿಡಿಯೋ ಗೇಮ್ಗಳ ವಿಚಾರದಲ್ಲಿ ಪಾಸಿಟಿವ್ ಫಲಿತಾಂಶ ನೀಡಿದ ಮೊದಲ ಅಧ್ಯಯನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 3274 ಜನರ ಮೇಲೆ ಈ ಸಮೀಕ್ಷೆ ನಡೆಸಲಾಗಿದ್ದು, ಸಂಶೋಧಕರು ಇವರಿಗೆಲ್ಲ ವಿಶ್ವದ ಪ್ರಸಿದ್ಧ ವಿಡಿಯೋ ಗೇಮ್ಗಳಾದ ಪ್ಲಾಂಟ್ಸ್ ವರ್ಸಸ್ ಜೋಂಬಿನ್ ಹಾಗೂ ಆನಿಮಲ್ ಕ್ರಾಸಿಂಗ್ ಎಂಬ 2 ವೀಡಿಯೋ ಗೇಮ್ಗಳನ್ನು ಬಳಸಿಕೊಂಡಿದ್ದರು ಹಾಗೂ ಗೇಮರ್ಗಳ ಮೇಲೆ ನಿಗಾ ಇಡಲಾಗಿತ್ತು.
ಈ ಅಧ್ಯಯನದ ಕೊನೆಯಲ್ಲಿ ವಿಡಿಯೋ ಗೇಮ್ನಿಂದ ಆರೋಗ್ಯದ ಮೇಲೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಎಂಬ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ವಿಡಿಯೋ ಗೇಮ್ ಆಡುವಾಗ ಗೇಮರ್ಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಅಂಶಗಳು ಬೆಳಕಿಗೆ ಬಂದಿವೆ. ಗೇಮ್ ವೇಳೆ ಆಟಗಾರರು ಅನುಭವಿಸಿದ ಭಾವನೆಗಳು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂತಿವೆ ಎಂದು ಅಧ್ಯಯನ ಹೇಳಿದೆ.