ಸದ್ಯದಲ್ಲೇ ಇಂಡಿಯನ್ ಬೌಲಿಂಗ್ ಲೀಗ್

ಬಾಕ್ಸ್ ಕ್ರಿಕೆಟ್ ಲೀಗ್ ಮೂಲಕ ಸೆಲೆಬ್ರಿಟಿಗಳನ್ನು ಕ್ರಿಕೆಟ್ ಆಡಿಸಿದ ಕಮರ್ ಫಿಲ್ಮ್ ಫ್ಯಾಕ್ಟರಿಯು ಈ ಬಾರಿ `ಇಂಡಿಯನ್ ಬೌಲಿಂಗ್ ಲೀಗ್ ‘ ಆಯೋಜಿಸಿದ್ದು ನವೆಂಬರ್ ಮೊದಲ ವಾರದಲ್ಲಿ ತಂಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಕಮರ್ ತಿಳಿಸಿದ್ದಾರೆ. ಅವರು ಈ ಕುರಿತಾಗಿ ನಡೆಸಲಾದ ಮಾಧ್ಯಮಗೋಷ್ಠಿಯಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.

ಬೌಲಿಂಗ್‌ ನಲ್ಲಿ ಪಾಲ್ಗೊಳ್ಳಲಿರುವ ಪ್ರಿಯಾಂಕಾ ಉಪೇಂದ್ರ ಅವರು ಮಾತನಾಡಿ, “ಈ ಹಿಂದೆ ಕಮರ್ ಫಿಲ್ಮ್ ಫ್ಯಾಕ್ಟ್ರಿಯ `ಸೆಲೆಬ್ರಿಟಿ ಬಾಕ್ಸ್ ಕ್ರಿಕೆಟ್ ಲೀಗ್’ ಎಂಜಾಯ್ ಮಾಡಿದ್ದೆ. ಇದು ಕೂಡ ಅಷ್ಟೇ ಕುತೂಹಲಕಾರಿಯಾಗಿದೆ. ಯಾಕೆಂದರೆ ಇದುವರೆಗೆ ನಾವು ಬೌಲಿಂಗ್ ಅನ್ನು ಫ್ಯಾಮಿಲಿ ಜತೆಗೆ ಆಡಿ ಅಭ್ಯಾಸ. ಈ ಬಾರಿ ಸೆಲೆಬ್ರಿಟಿಗಳೊಂದಿಗೆ ಆಡುವುದನ್ನು ನೀಡಿ ತುಂಬಾ ಜನ ಎಂಜಾಯ್ ಮಾಡುವ ಭರವಸೆ ಇದೆ” ಎಂದರು. ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮಾತನಾಡಿ “ನಾನು ಕೂಡ ಬಾಕ್ಸ್ ಕ್ರಿಕೆಟ್ ಲೀಗ್‌ ನಲ್ಲೇ ಭಾಗವಹಿಸಬೇಕಿತ್ತು. ಆದರೆ ಆಗ ಸಮಯ ಹೊಂದಾಣಿಕೆ ಆಗಿರಲಿಲ್ಲ. ಆದರೆ ಈ ಬಾರಿ ಇಂಡಿಯನ್ ಬೌಲಿಂಗ್ ಲೀಗಲ್ಲಿ ಪಾರ್ಟಿಸಿಪೇಟ್ ಮಾಡುತ್ತಿದ್ದೇನೆ”ಎಂದರು.

ಈ ಯೋಜನೆ ಹುಟ್ಟಿಕೊಂಡ ಬಗ್ಗೆ ಮಾತನಾಡಿದ ಕಮರ್ ಅವರು “ನಾನು ಕಳೆದ ಡಿಸೆಂಬರ್ ನಲ್ಲಿ ಹೀಗೆ ಬೌಲಿಂಗ್ ಆಡ್ತಾ ಇದ್ದೆ. ಆಗ ನನಗೊಂದು ಐಡಿಯಾ ಫ್ಲ್ಯಾಶ್ ಆಯಿತು. ಯಾಕೆ ನಾವು ಇದನ್ನು ಇಂಡಸ್ಟ್ರಿ ಗೆ ತರಬಾರದು ಅಂತ. ಅದಕ್ಕಾಗಿ ಅದರ ಮೇಲೆ ವರ್ಕ್ ಮಾಡಿದೆ. ಆ ಸಮಯದಲ್ಲೇ ಲಾಕ್ ಡೌನ್ ಬಂತು. ಹಾಗಾಗಿ ಪ್ರಿಪರೇಶನ್‌ಗೆ ಸಾಕಷ್ಟು ಟೈಮ್ ಸಿಕ್ತು! ಇದೇ ತರಹ ನಾನು ಮೂರು ವರ್ಷದ ಹಿಂದೆ ಬಾಕ್ಸ್ ಕ್ರಿಕೆಟ್ ಅಂತ ಮಾಡಿದ್ದೆ . ಹಾಗಾಗಿ ಕೇವಲ ಗೇಮ್ ಫಾರ್ಮಾಟ್ ಚೇಂಜ್ ಮಾಡುವುದಷ್ಟೇ ಕೆಲಸವಾಗಿತ್ತು. ಇದರಲ್ಲಿ 4 ಮಂದಿ ಹುಡುಗಿಯರು 4 ಮಂದಿ ಹುಡುಗರು ಇರುತ್ತಾರೆ. 24 ಮ್ಯಾಚಸ್ ಇರುತ್ತೆ. 80ರಿಂದ 90ಜನ ಸ್ಟಾರ್ಸ್ ಇರ್ತಾರೆ. ಸುಮಾರು ಮೂರು ಕೋಟಿ ವೆಚ್ಚದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರಾಯೋಜಕರ ಸಹಕಾರವಿದೆ. ಒಟ್ಟಾಗಿ ಹತ್ತು ಟೀಮ್ ಗಳು ಇವೆ. ನವೆಂಬರ್ ಫಸ್ಟ್ ವೀಕ್ ಲಾಂಚ್ ಇದೆ. ಟೂರ್ನಮೆಂಟ್ ಒಂದು ವಾರ ನಡೆಯುತ್ತೆ. ಫಸ್ಟ್ ಸೆಕೆಂಡ್ ಪ್ರೈಸ್ ಇರುತ್ತೆ. ಕಪ್ ಇರುತ್ತೆ. ಕ್ಯಾಶ್ ಪ್ರೈಸ್ ಇರುತ್ತೆ. ಜತೆಗೆ ಪಾಲ್ಗೊಂಡ ಪ್ರತಿ ಕಲಾವಿದರಿಗೂ ಶಕ್ತಿಯಾನುಸಾರ ಆರ್ಥಿಕ ಬೆಂಬಲ ನೀಡುವ ಭರವಸೆ ಕೊಡುತ್ತಿದ್ದೇನೆ ” ಎಂದಿದ್ದಾರೆ. ಒಟ್ಟಿನಲ್ಲಿ ಕೋವಿಡ್ ಕಾಲದಲ್ಲಿ ಸದ್ದುಗದ್ದಲ ಕಳೆದುಕೊಂಡ ಚಿತ್ರರಂಗಕ್ಕೆ ಇದೊಂದು ಸಂಭ್ರಮದ ಕ್ಷಣವಾಗುವುದರಲ್ಲಿ ಸಂದೇಹವಿಲ್ಲ.

Exit mobile version