ದೀಪಾಲಂಕಾರ ಕೊರೊನಾವನ್ನು ಆಹ್ವಾನಿಸುತ್ತಿದೆಯೇ?

ಮೈಸೂರು, ಅ.19: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸ ಬೇಕೆಂದು ಸರ್ಕಾರ ನಿಸಿರುವುದು ಸಂತೋಷದ ಸಂಗತಿ. ಆದರೆ ಪ್ರತೀ ವರ್ಷದಂತೆ ಈ ಬಾರಿಯೂ ಅದ್ದೂರಿ ದೀಪಾಲಂಕಾರ ಏತಕ್ಕೆ ಎಂಬ ವಿಷಯದ ಕುರಿತು ಸಾರ್ವಜನಿಕ ವಲಯದಲ್ಲಿ ಪರ – ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ಬಾರಿ ನಗರಾಧ್ಯಂತ ಮಾಡಿರುವ ದೀಪಾಲಂಕಾರ ನೋಡುಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ.

ಕೋವಿಡ್-19ರ ಅಟ್ಟಹಾಸದ ನಡುವೆ ಈ ರೀತಿಯ ಸಂಭ್ರಮ ಕುರಿತು ಭಾರೀ ಟೀಕೆ-ವಿರೋಧವೂ ವ್ಯಕ್ತವಾಗಿದೆ. ಈ ಹಿಂದೆಯೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೊರೋನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಿದ್ದರು.

ರಾಜ್ಯ ಸರ್ಕಾರ ಕೆಲವು ವ್ಯಾಪಾರಸ್ಥರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದು ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಸರ್ಕಾರದ ಬೇಜವಾಬ್ದಾರಿ ಎಂಬ ಅಪಸ್ವರವೂ ಕೇಳಿ ಬರುತ್ತಿದೆ. ಮೈಸೂರು ನಗರದಲ್ಲಿ ಕೊರೋನಾ ವೈರಸ್ ಹರಡುತ್ತಿರುವುದ ಹಿನ್ನೆಲೆಯಲ್ಲಿ ಸರಳ ದಸರಾ ಎಂದು ಹೇಳಿಕೊಂಡು, ಈ ರೀತಿ ಜನರು ಒಂದೆಡೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಇಲ್ಲದೇ ಸೇರಿ ಬರಲು ಅವಕಾಶ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನಲಾಗುತ್ತಿದೆ. ಈಬಗ್ಗೆ ಸರ್ಕಾರ ಸೂಕ್ತ ಕ್ರಮ ಜರುಗಿಸದೆ ಬೇಜವಾಬ್ದಾರಿಯಿಂದ ವರ್ತಿಸುವುದು ಮುಂದುವರಿಸಿದರೆ ಕೋರೋನ ಅಟ್ಟಹಾಸ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.

ದಸರಾ ವಿದ್ಯುತ್ ದೀಪಾಲಂಕಾರ ನೋಡಲು ಆಗಮಿಸುವ ಜನರು ಕೊರೋನಾ ಲೆಕ್ಕಿಸದೇ ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಹೀಗಾಗಿ ವಿದ್ಯುತ್ ದೀಪಾಲಂಕಾರದ ವೇಳೆ ಸೆಲ್ಫಿಗೆ ಮುಗಿ ಬೀಳುತ್ತಿರುವ ಬಗ್ಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, 540 ಜನ ಇರುವ ಸಂಸತ್‌ನಲ್ಲಿ 60 ಜನ ಒಳಗೆ ಬರಲು ಸಾಧ್ಯವಾಗಿಲ್ಲ. ಇಲ್ಲಿ ನಾವೇ ಎಲ್ಲೋ ಕೊರೋನಾ ಹೆಚ್ಚು ಮಾಡ್ತಿದ್ದೀವಿ ಅನಿಸುತ್ತೆ ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ಸಣ್ಣ ಪುಟ್ಟ ವರ್ತಕರಿಗೆ ಅನುಕೂಲ ಆಗಬಹುದು. ಆದರೇ ಪ್ರವಾಸೋದ್ಯಮ ಏನು ಅಭಿವೃದ್ದಿಯಾಗಲ್ಲ. ಪ್ರಧಾನಿ ಮೋದಿಯೇ ಹೇಳಿದ್ದಾರೆ ಜೀವ, ಜೀವನ ಎರಡೂ ದೃಷ್ಠಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಅಂತ. ಹೀಗಾಗಿ ಇದನ್ನ ಅರ್ಥ ಮಾಡಿಕೊಂಡು ನಾವು ಹೆಜ್ಜೆ ಇಡಬೇಕಿದೆ‌ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ನಗರದಾದ್ಯಂತ ಪ್ರಮುಖ ವೃತ್ತ ಹಾಗೂ ಕಟ್ಟಡ ಸೇರಿದಂತೆ ಹಲವೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ, ಝಗಮಗಿಸುತ್ತಿರುವ ದೀಪಾಲಂಕಾರ ನೋಡಲು ಜನರು ಮುಗಿಬೀಳುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

Exit mobile version