ಸಿಬಿಐ ದಾಳಿ: ಸಿಕ್ಕಿದ್ದು ಒಟ್ಟು ₹ 5.27 ಲಕ್ಷ ಮಾತ್ರ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಸಿಬಿಐ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಹಾಗೂ ಡಿಕೆಶಿ ಆಪ್ತರಿಗೆ ಧಾಳಿ ಶಾಕ್ ನೀಡಿದ‌ ಬೆನ್ನಲ್ಲೇ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣ ಸಂಬಂಧಿಸದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗೆ ಸದ್ಯದಲ್ಲೇ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದ್ದು, ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬದವರಿಗೆ ಸಂಬಂಧಿಸಿದ ಬೆಂಗಳೂರು, ಮುಂಬಯಿ, ದೆಹಲಿ, ಹಾಸನ ಸಹಿತ 14 ಕಡೆ ದೊರೆತಿರುವ ದಾಖಲೆಗಳ ಕ್ರೋಡೀಕರಣ ನಡೆಯುತ್ತಿದೆ.

ಪ್ರಾಥಮಿಕ ತನಿಖೆಯಲ್ಲಿ ಸಿಬಿಐ ಅಕ್ರಮ ಆದಾಯ ಗಳಿಕೆ ಸಂಬಂಧದ ದಾಖಲೆಗಳು ಮತ್ತು ಶೋಧದ ವೇಳೆ ಲಭಿಸಿರುವ ದಾಖಲೆಗಳನ್ನು ಒಟ್ಟಾರೆಯಾಗಿ ಪರಿಶೀಲಿಸಲಾಗುತ್ತಿದೆ.

ಬಳಿಕ ಮುಂದಿನ ಕ್ರಮಗಳ ಬಗ್ಗೆ ಚಿಂತನೆ ನಡೆಸಲಿದ್ದು, ಡಿ.ಕೆ.ಶಿವಕುಮಾರ್, ಸೋದರ ಸಂಬಂಧಿ ಶಶಿಕುಮಾರ್‌, ಆಪ್ತ ಆಂಜನೇಯ ಅವರಿಗೆ ಸದ್ಯದಲ್ಲಿಯೇ ಸಮನ್ಸ್‌ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖೆ ವೇಳೆ ಸಿಕ್ಕಿದ ಆಸ್ತಿಗೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಡಿಕೆಶಿ ಉತ್ತರ ಕೊಡುವುದು ಅನಿವಾರ್ಯವಾಗಿದೆ.

ರಾಜಕಾರಣದಲ್ಲಿ ಯಾವುದನ್ನು ಗೌಪ್ಯವಾಗಿರಿಸಲು ಸಾಧ್ಯವಿಲ್ಲವಾದ್ದರಿಂದ ಡಿ.ಕೆ. ಸುರೇಶ್‌ ಅವರ ದೆಹಲಿ ನಿವಾಸದಲ್ಲಿ 1.50 ಲಕ್ಷ ರೂ., ನಮ್ಮ ಮನೆಯಲ್ಲಿ 1.77 ಲಕ್ಷ ರೂ., ಕಚೇರಿಯಲ್ಲಿ 3.50 ಲಕ್ಷ ರೂ. ಸಿಕ್ಕಿದೆ. ಊರಿನಲ್ಲಿ ಯಾವುದೇ ಹಣ ಸಿಕ್ಕಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಈ ಧಾಳಿಯಲ್ಲಿ 57 ಲಕ್ಷ ರೂ. ದೊರೆತಿದೆ ಎಂಬ ಸಿಬಿಐ ಹೇಳಿಕೆಗೆ ಅವರು ಸ್ಪಷ್ಟೀಕರಣ ನೀಡಿದ್ದು, ಅವರ ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ನೇಹಿತ ಸಚಿನ್‌ ನಾರಾಯಣ ಮನೆಯಲ್ಲಿ 50 ಲಕ್ಷ ರೂ. ಸಿಕ್ಕಿದೆ ಎಂಬ ಮಾಹಿತಿಯಿದ್ದು, ಧವನಂ ಬಿಲ್ಡರ್ಸ್‌ ಅವರಿಂದ ದಾಖಲೆ ಪತ್ರ ತೆಗೆದುಕೊಂಡು ಹೋಗಿದ್ದಾರೆ. ಮುಂಬಯಿಯ ಮನೆ ಮಗಳ ಹೆಸರಿನಲ್ಲಿದೆ. ಮನೆಯಲ್ಲಿ ಏನೂ ಇಲ್ಲ. ಕೆಲವು ಕಾಗದ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದವರು ತಿಳಿಸಿದರು.

Exit mobile version